ಚಿಕ್ಕಮಗಳೂರು :ನಾನು ಸಂಘದ ಸ್ವಯಂಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಮಾಜಿ ಶಾಸಕ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿಗೆ ಟ್ರೀಟ್ಮೆಂಟ್ ಅಗತ್ಯ ಇದೆ ಎಂಬ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿದರು. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ. ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಬಗ್ಗೆ ನನಗೆ ಭಯ ಆಗುತ್ತಿದೆ. ಈ ಸಂಬಂಧ ನಾನು ಮುಖ್ಯಮಂತ್ರಿಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ದೇಶದ ಶ್ರೀಮಂತ ಶಾಸಕ. ಅವರ ಬಳಿ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಇಲಾಖೆ ಎಲ್ಲಾ ಇದೆ. ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ. ಅಧಿಕಾರವು ಮದ ನಿರ್ಮಾಣ ಮಾಡುತ್ತದೆ. ಅಧಿಕಾರ ಲಭಿಸಿರುವ ಅಹಂ ಭಾವದಿಂದ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬಹುದು. ಆ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಕೊಡುವ ಬಗ್ಗೆ ಮಾತನಾಡಿದ್ದಾರೆ. ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತ, ನನ್ನನ್ನು ಟಾರ್ಗೆಟ್ ಮಾಡಿ ಅವರು ಸಿಎಂ ಆಗಲು ಸಾಧ್ಯವಿಲ್ಲ. ಸಿಎಂ ಆಗಲು ನೀವು ಬೇರೆಯವರನ್ನು ಟಾರ್ಗೆಟ್ ಮಾಡ್ಬೇಕು, ನನ್ನನ್ನೇಕೆ ಟಾರ್ಗೆಟ್ ಮಾಡ್ತೀರಾ ಎಂದು ಸಿ ಟಿ ರವಿ ಪ್ರಶ್ನಿಸಿದರು.
ಏಕರೂಪ ನಾಗರೀಕ ಸಂಹಿತೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಜಾತ್ಯತೀತರು, ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಸಂವಿಧಾನದ ಮೂಲ ಪೀಠಿಕೆಯಲ್ಲೇ ಸಮಾನತೆಯ ಪ್ರಸ್ತಾಪವಿದೆ. ಮತಕ್ಕೊಂದು ಕಾನೂನು ಏಕೆ ಬೇಕು?. ಸಮಾನತೆ ಏಕೆ ಇರಬಾರದು. ಓಲೈಕೆಯ ರಾಜನೀತಿಗೆ ಕಡಿವಾಣ ಬೀಳಬೇಕು. ಸಂವಿಧಾನ ಕೂಡ ದೇಶದ ಎಲ್ಲರೂ ಸಮಾನರು ಎಂಬ ಆಶಯವನ್ನು ಎತ್ತಿ ಹಿಡಿದಿದೆ. ಶೀಘ್ರವೇ ಸಮಾನ ನಾಗರೀಕ ಸಂಹಿತೆ ಜಾರಿಗೆ ಬರಬೇಕು. ಸಮಾನ ನಾಗರಿಕ ಸಂಹಿತೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಪ್ರಧಾನಿ ಖುದ್ದು ಮಾತನಾಡಿದ ನಂತರ ಈ ವಿಷಯ ಮುನ್ನಲೆಗೆ ಬಂದಿದೆ ಎಂದರು.