ಚಿಕ್ಕಮಗಳೂರು : ಕೇಂದ್ರದ ಒಪ್ಪಿಗೆ ಆಧಾರದ ಮೇಲೆ ಜುಲೈ 1 ರಿಂದ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಬಳಿಕ ಕೇಂದ್ರ ಸರ್ಕಾರ ಉಲ್ಟಾ ಹೊಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಸುಳ್ಳು ರಾಮಯ್ಯ ಅಲ್ಲಾ ಎನ್ನುವುದಾದರೆ ಎಫ್‌ಸಿಐ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಆರೋಪದ ಕುರಿತು ಮಾತನಾಡಿದ ಮಾಜಿ ಶಾಸಕರು, "ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಜನರಿಗೆ ಹಣ ಕೊಡಿ, ಅವರು ಅಕ್ಕಿ ತೆಗೆದುಕೊಳ್ಳುತ್ತಾರೆ. ನಾವು ನಿಮಗೆ ಅಕ್ಕಿ ಕಳಿಸುತ್ತೇವೆ, ನಿಮ್ಮ ಹೆಸರು ಹಾಕಿಕೊಂಡು ಕೊಡಿ ಅಂತಾ ಕೇಂದ್ರದಿಂದ ಪತ್ರ ಕಳಿಸಿಲ್ಲ. ಹಾಗಾದರೆ, ಸಿಎಂ ಸಿದ್ದರಾಮಯ್ಯ ಕಮಿಟ್ಮೆಂಟ್ ಪತ್ರ ತೋರಿಸಲಿ. ಎಫ್.ಸಿ.ಐ. ನಿಮಗೆ ಅಗತ್ಯವಿರುವ ಅಕ್ಕಿಯನ್ನು ಕಳಿಸುತ್ತೇವೆ ಎಂದು ಹೇಳಿದ್ದಾರಾ?. ತಮ್ಮ ಕೈಯ್ಯಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರು ನಾಲೈದು ತಿಂಗಳ ಬಳಿಕ ಆರೋಪ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಆರೋಪ ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ಜುಲೈ 1 ರಿಂದ ಉಚಿತ ಅಕ್ಕಿ ಎಂದು ಭಾಷಣ ಮಾಡಿ ಈಗ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದೀರಾ?. ನೀವು ಎಲ್ಲ ಬಿ.ಪಿ.ಎಲ್. ಕಾರ್ಡ್ದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ :Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ