ಚಿಕ್ಕಮಗಳೂರು:ಚಂದ್ರಯಾನ 140 ಕೋಟಿ ಜನರಿಗೆ ಸೇರಿದ್ದು ಎಂದು ಪ್ರಧಾನಿಯೇ ಹೇಳಿದ್ದಾರೆ. 140 ಕೋಟಿಯಲ್ಲಿ ಕಾಂಗ್ರೆಸ್ ಇದೆ ಎಂದು ಭಾವಿಸಿದ್ದೇನೆ. ಇಲ್ಲ ಎಂದುಕೊಂಡರೆ ಅದು ಅವರ ದುರ್ದೈವ. ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಅವರು ಇದ್ದಾರೆ ಎಂದು ಅಂದುಕೊಂಡಿದ್ದೇವೆ. ಅವರು ಯಾಕೆ ನಾವಿಲ್ಲ ಎಂದುಕೊಳ್ಳುತ್ತಾರೆ ಎಂಬುದು ನನಗೆ ಅರ್ಥವಾಗದ ಸಂಗತಿ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ನಗರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ. ಕಾಂಗ್ರೆಸ್ ಜನಸಾಮಾನ್ಯರ ಜೊತೆಗಿರುವುದನ್ನು ಅಪರಾಧ ಎಂದು ಭಾವಿಸುತ್ತದೆ. ಕಾಂಗ್ರೆಸಿಗರಿಗೆ ಜನಸಾಮಾನ್ಯರ ಜೊತೆ ಇದ್ದರೆ ಕೀಳರಿಮೆಯ ಭಾವನೆ ಬರುತ್ತದೆ. ಕಾಂಗ್ರೆಸಿಗರು ಒಡ್ಡೋಲಗದ ಮೂಲಕ ತಮ್ಮನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ. ಇದು ಒಂದು ಪಕ್ಷಕ್ಕೆ ಸೀಮಿತವಾದುದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ಈ ವೇಳೆ ನಮ್ಮವರು ಜನರ ಜೊತೆ ಇದ್ದು, ಪ್ರಧಾನಿ ಅವರನ್ನು ಸ್ವಾಗತಿಸಿದ್ದಾರೆ. ಪ್ರಧಾನಿ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ ಎಂದು ಹೇಳಿದರು. ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರಾದರೂ ಪಕ್ಷ ತೊರೆದು ಬಂದರೆ ಅವರಿಗೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸಿಗರು ಗೌರವದಿಂದ ಕರೆಯುತ್ತಿಲ್ಲ, ಗೌರವ ಇಲ್ಲದ ಜಾಗಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನಿಸಿದರು.
ಗೌರವ ಇಲ್ಲದ ಜಾಗಕ್ಕೆ ಯಾರೂ ಹೋಗಲ್ಲ ಅನ್ನೋದು ನನ್ನ ನಂಬಿಕೆ. ಹೋದರೆ ನಾವು ಯಾವ ಪರಿಸ್ಥಿತಿಯನ್ನ ಬೇಕಾದರೂ ಎದುರಿಸುತ್ತೇವೆ. ಎಸ್ ಟಿ ಸೋಮಶೇಖರ್, ಕೆಲವರು ನನ್ನನ್ನ ಕಳಿಸಲು ನೋಡುತ್ತಿದ್ದಾರೆ ಎಂದಿದ್ದಾರೆ. ನಾನು ಅದೇ ದಾಟಿಯಲ್ಲಿ ಉತ್ತರಿಸಿದರೆ, ಕಳಿಸೋಕೆ ನೋಡ್ತಿದ್ದೇವೆ ಎಂದು ಅನಿಸುತ್ತದೆ. ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ, ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಉಳಿಯೋದು, ಬಿಡೋದು ಅವರಿಗೆ ಬಿಟ್ಟಿದ್ದು. ಅವರು ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ, ಅಪಾರ್ಥ ಕಲ್ಪಿಸಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಕಾರ್ಯಕರ್ತರ ಬಲದ ಮೂಲಕ ಪಕ್ಷ ಕಟ್ಟಿದ್ದೇವೆ, ಕಾರ್ಯಕರ್ತರಿಂದಲೇ ಎಲ್ಲವನ್ನು ಎದುರಿಸುತ್ತೇವೆ ಎಂದು ಸಿ ಟಿ ರವಿ ಹೇಳಿದರು.
ಇದನ್ನೂ ಓದಿ:ನಮ್ಮದು ಆಪರೇಶನ್ ಅಲ್ಲ ಕೋ ಆಪರೇಷನ್ ಅಷ್ಟೇ : ಸಚಿವ ಬೋಸರಾಜು