ಚಿಕ್ಕಮಗಳೂರು: ವಿಜಯನಗರವನ್ನು ಜಿಲ್ಲೆಯನ್ನಾಗಿ ಸರ್ಕಾರ ಘೋಷಣೆ ಮಾಡಿರುವ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಜಿಲ್ಲೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಯಾವ ಹಿನ್ನೆಲೆಯಲ್ಲಿ ಹೊಸ ವಿಜಯನಗರ ಜಿಲ್ಲೆ ರಚನೆಯಾಗಿದೆ, ಅದಕ್ಕೆ ಯಾವ ತಾಲೂಕುಗಳನ್ನು ಸೇರಿಸಬೇಕು ಎಂಬುದು ನಿಶ್ಚಯವಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ ಸತ್ಯವನ್ನು ಕಾಂಗ್ರೆಸ್ನವರು ಯಾವಾಗ ನಂಬಿದ್ದಾರೆ. ಸತ್ಯವನ್ನು ನಂಬದೇ ಇರೋರಿಗೆ ಹೇಳಿದ್ದೆಲ್ಲಾ ಸುಳ್ಳಾಗಿ ಕಾಣಿಸುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್ನವರಿಗೆ ಇಲ್ಲ. ಕಾಂಗ್ರೆಸ್ನವರು ಸಿಎಎ ಯಿಂದ ಮುಸ್ಲಿಮರ ಪೌರತ್ವ ಕಿತ್ತುಹಾಕುತ್ತಾರೆ ಎಂದು ಭಯ ಹುಟ್ಟಿಸಿ ಮುಸ್ಲಿಮರನ್ನು ಬೀದಿಗೆ ಇಳಿಸಿದರು. ಸಿಎಎ ಬಂದು ಒಂದು ವರ್ಷವಾಗಿದೆ. ಇಲ್ಲಿಯವರೆಗೂ ಓರ್ವ ಮುಸ್ಲಿಂ ವ್ಯಕ್ತಿಯ ಪೌರತ್ವ ಹೋಗಿದೆಯಾ? ಎಂದು ಪ್ರಶ್ನಿಸಿದರು.
ಇನ್ನು ಕನ್ನಡ ಪ್ರೇಮಿ ಟಿಪ್ಪು ಸುಲ್ತಾನ್ ಅಂತ ಹೇಳಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಆಡಳಿತ ಭಾಷೆಯನ್ನು ಪರ್ಶಿಯನ್ ಭಾಷೆಯನ್ನಾಗಿ ಮಾಡಲಾಯಿತು. ಈಗ ಕೃಷಿ ಬಿಲ್ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ಗೆ ಸುಳ್ಳೇ ಮನೆ ದೇವರು. ಕಾಂಗ್ರೆಸ್ಗೆ ಹೋದ ನಂತರ ಸಿದ್ದರಾಮಯ್ಯನವರು ಕೂಡ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಚುನಾವಣೆ ನ್ಯಾಯಲಯದ ತೀರ್ಮಾನದಂತೆಯೇ ಘೋಷಣೆಯಾಗಿದ್ದು, ಕೋವಿಡ್ ಅನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲಾಗುತ್ತದೆ. ಎಲ್ಲರು ನಿಮ್ಮ ಊರಿನ ಸಮಸ್ಯೆಗಳನ್ನು ಬಗೆಹರಿಸುವಂತಹ ಯೋಗ್ಯರನ್ನು ಆರಿಸಿ. ನಮ್ಮ ಪಕ್ಷದ ಕಾರ್ಯಕರ್ತರು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು, ಗ್ರಾಮ ಸ್ವರಾಜ್ ಯಾತ್ರೆ ನಡೆಯುತ್ತಿದೆ. ನಾವು ಸದಾ ಜನರ ನಡುವೆಯೇ ಇದ್ದು ಉತ್ತಮ ಕೆಲಸ ಮಾಡುತ್ತಿರುವುದರಿಂದ ಸ್ವಾಭಾವಿಕವಾಗಿಯೇ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಗೆದ್ದು ಬರುತ್ತಾರೆ ಎಂದು ಹೇಳಿದರು.
ನಿಗಮ ಮಂಡಳಿಗಳ ಕುರಿತು ಕೆಲವು ಸಂಗತಿಗಳನ್ನು ಕೋರ್ ಕಮಿಟಿಯಲ್ಲಿ ಚರ್ಚಿಸ ಬೇಕಾಗುತ್ತದೆ. ವ್ಯಕ್ತಿಗಳನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಆದರೆ ಆಯ್ಕೆಯ ಮಾನದಂಡ ಹಾಗೂ ಆಯ್ಕೆಯ ಪದ್ಧತಿ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಸದಸ್ಯರನ್ನು ಆಯ್ಕೆ ಮಾಡಲು ಮಾನದಂಡ ಯಾವುದು ಎಂಬುದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದರು.