ಚಿಕ್ಕಮಗಳೂರು: ನಾನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ನೆಹರು ಹಾಗೂ ಇಂದಿರಾ ಗಾಂಧಿಯವರ ಕೊಡುಗೆ ಇಲ್ಲ ಅಂತ ಎಲ್ಲಿಯೂ ಹೇಳಿಲ್ಲ. ಎಲ್ಲವನ್ನೂ ಅವರೇ ಮಾಡಿದ್ದಾರೆ ಎಂಬ ರೀತಿ ಬಿಂಬಿಸುವುದು ಸರಿಯಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
217 ಯೋಜನೆಗಳಿಗೆ ನೆಹರು ಪರಿವಾರದ ಹೆಸರನ್ನು ಇಟ್ಟಿದ್ದಾರೆ. ಹಾಗಿದ್ದರೆ ದೇಶಕ್ಕಾಗಿ ಉಳಿದವರು ಯಾರು ತ್ಯಾಗ ಮಾಡಿಲ್ವ?. ಹುಕ್ಕಾ ಬಾರ್ ಬಗ್ಗೆ ಮಾತನಾಡಿದ ತಕ್ಷಣ ಅವರಿಗೆ ಉರಿ ಹೊತ್ತಿಕೊಂಡಿದೆ. ಹುಕ್ಕಾವನ್ನು ನೆಹರು ಸೇದಿದ್ದು ತಪ್ಪಾ?, ಅಥವಾ ಅದರ ಬಗ್ಗೆ ರವಿ ಹೇಳಿದ್ದು ತಪ್ಪಾ?. ನೆಹರು ಅವರು ಹುಕ್ಕಾ ಸೇದುತ್ತಿರುವುದು ಹಲವಾರು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ನನ್ನ ಮೇಲೆ ಇಷ್ಟು ದ್ವೇಷ ಇದೆ ಅಂದ ಮೇಲೆ ನೆಹರು ಅವರ ಮೇಲೆ ಕಾಂಗ್ರೆಸ್ನವರಿಗೆ ಇನ್ನೆಷ್ಟು ದ್ವೇಷ ಇರಬೇಕು. ನಾನು ಹೇಳಿದ್ದು ತಪ್ಪು ಎನ್ನುವುದಾದರೆ ಅವರು ಮಾಡಿದ್ದು ಕೂಡ ತಪ್ಪೇ ಅಲ್ವಾ? ಎಂದು ಪ್ರಶ್ನಿಸಿದರು.
ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ:
ವೀರ ಸಾವರ್ಕರ್ ಅವರ ತ್ಯಾಗದ ಅರಿವು ಕಾಂಗ್ರೆಸ್ನವರಿಗೆ ಇದೆಯಾ?. ಸಾವರ್ಕರ್ ಅವರು ಎರಡು ಬಾರಿ ಕರಿ ನೀರಿನ ಶಿಕ್ಷೆ, ಎರಡು ಜೀವಾವಧಿ ಶಿಕ್ಷೆ ಅನುಭವಿಸಿದ್ದಾರೆ. ಅವರ ಬಗ್ಗೆ ಎಷ್ಟು ಲಘುವಾಗಿ ಮಾತನಾಡಿದ್ದಾರೆ. ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಇಂದಿರಾಗಾಂಧಿ ಅವರ ತುರ್ತು ಪರಿಸ್ಥಿತಿ ನೆನೆಪಿಸಿಕೊಳ್ಳಲು ಸಾಧ್ಯವಾಗುತ್ತಾ?. ನೆಹರು ಹಾಗೂ ಇಂದಿರಾ ಗಾಂಧಿ ಬಗ್ಗೆ ಮಾತನಾಡುವುದು ತಪ್ಪು ಅಂತಾರಲ್ಲ, ಹಳೆಯ ಪ್ರತಿಗಳನ್ನು ಸಿದ್ದರಾಮಯ್ಯ ಮಾತನಾಡಿರುವುದು ಕಳುಹಿಸಿ ಕೊಡಬೇಕಾ? ಎಂದರು.