ಚಿಕ್ಕಮಗಳೂರು:ಸಿ.ಟಿ.ರವಿ ಲೂಟಿ ರವಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಚಿಕ್ಕಮಗಳೂರು ನಗರದಲ್ಲಿ ಮಾಜಿ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೇಡಿ ಥರ ಆಡಬಾರದು. ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಅವರು ಕೇಡಿ ರೀತಿ ನಡೆದುಕೊಳ್ಳುವುದು ಪಕ್ಷ, ರಾಜ್ಯ ಎರಡಕ್ಕೂ ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಐಟಿ ದಾಳಿ ಸಂಬಂಧಿಸಿದಂತೆ ಅದು ಕಾಂಗ್ರೆಸ್ನವರ ಬೇನಾಮಿ ಹಣ ಅಂತ ನಮಗೆ ಬಂದಿರುವ ವರದಿ. ಇವರುಗಳೇ ನಂಬರ್ 1, ನಂಬರ್ 2 ಅಂತ ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿಯಾಗಿದೆ. ನಮ್ಮ ಆರೋಪ, ಅದನ್ನು ನಿರಾಕರಿಸುವ ಅಧಿಕಾರ ಅವರಿಗಿದೆ. ನಿರಾಕರಿಸುವ ಭರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತ ಹೇಳೋದು, ಆಶ್ವತ್ಥ ನಾರಾಯಣ್ ಅವರಿಗೆ ನವರಂಗಿ ನಾರಯಾಣ ಅನ್ನೋದು, ನನಗೆ ಸಿ.ಟಿ. ತೆಗೆದು ಲೂಟಿ ಅಂತಿದ್ದಾರೆ. ಹಾಗಾದರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವಾ? ಎಂದು ಹೇಳಿದರು.
ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಉಪ ಮುಖ್ಯಮಂತ್ರಿ ತಮಗಿರುವ ಜವಾಬ್ದಾರಿಯ ಅರಿವಿದ್ದು ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಹೆದರಿಸುವ, ಬೆದರಿಸುವ ರಾಜಕಾರಣ ಮಾಡಬಾರದು. ಇಲ್ಲಿ ಹೆದರೋಕೆ, ಬೆದರೋಕೆ ಯಾರಿದ್ದಾರೆ?. ಅವರೇನೂ ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವರಾ? ಇಷ್ಟಕ್ಕೂ ನನ್ನ ಆಸ್ತಿ ಸಾವಿರಾರು ಕೋಟಿ ಏನಿಲ್ಲ. ಲೂಟಿ ಯಾರು ಮಾಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಅಜಗಜಾಂತರ ವ್ಯತ್ಯಾಸ ಆಗಿರುವುದು ಯಾರ ಆಸ್ತಿ ಡಿ.ಕೆ.ಶಿವಕುಮಾರ್ ಅವ್ರೇ? ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆ ಎಂದರು.