ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಬರೋಬ್ಬರಿ 3000 ಅಡಿ ಎತ್ತರದಲ್ಲಿರುವ ಬಿಂಡಿಗ ದೇವಿರಮ್ಮ ಎಂಬ ಸುಪ್ರಸಿದ್ಧ ದೇವಾಲಯವಿದೆ. ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಈ ದೇವಿಯನ್ನು ನೋಡಲು ರಾಜ್ಯ ಸೇರಿದಂತೆ ಹಲವೆಡೆಯಿಂದ ಸಾಕಷ್ಟು ಭಕ್ತಗಣ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಹಾಗೆಯೇ ಹರಕೆ ಹೊತ್ತವರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆಯುವುದು ಸಾಮಾನ್ಯ. ಅದರಂತೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಟುಂಬ ಸಮೇತರಾಗಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಬೆಟ್ಟದ ವೈಶಿಷ್ಟ್ಯತೆ:
ದೇವಿಯ ದರ್ಶನ ಮಾಡಲು ಬರುವ ಭಕ್ತರು ಸುಮಾರು 6 ಕಿ.ಮೀ. ದೂರವನ್ನು ಕ್ರಮಿಸಲೇಬೇಕು. ಬೆಟ್ಟ-ಗುಡ್ಡಗಳ ಸಾಲಿನಲ್ಲಿ ಮಂಜಿನ ಹನಿಗಳ ನಡುವೆ ಬರಿಗಾಲಿನಲ್ಲಿಯೇ ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ. ಇನ್ನು ಬೆಟ್ಟ ಏರುವವರು ಬೆಳಗ್ಗೆ 3 ಗಂಟೆಯಿಂದಲೇ ತಮ್ಮ ಪಾದಯಾತ್ರೆ ಆರಂಭಿಸುವುದು ಇಲ್ಲಿನ ರೂಢಿ. ಬೆಟ್ಟ ತುಂಬಾ ಎತ್ತರದಲ್ಲಿರುವುದರಿಂದ ಆಯಾಸ ಆಗುವುದು ಸಾಮಾನ್ಯ. ಆದರೆ ಬೆಟ್ಟ ಏರಿ ದೇವಿಯ ದರ್ಶನ ಪಡೆದರೆ ಸಾಕು ಅಲ್ಲಿಯ ವಾತಾವರಣ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ.