ಚಿಕ್ಕಮಗಳೂರು: ಧಾರಾಕಾರವಾಗಿ ಸುರಿದ ಮಳೆಯಿಂದ ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಟಿ ಉಂಟಾಗಿದೆ. ಇದರಿಂದ 100 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಇಲ್ಲಿನ ತೋಟಗಾರಿಕೆ ಬೆಳೆಗಳು, ಕೃಷಿ ಬೆಳೆಗಳು ಸೇರಿದಂತೆ ರಸ್ತೆ, ಚರಂಡಿ ಹದಗೆಟ್ಟಿವೆ. ಶೃಂಗೇರಿಯ ಕೆರೆಕಟ್ಟೆ, ನಾರ್ವೆ, ಬಸರಿಕಟ್ಟೆ, ಕುಂಚೇಬೈಲು, ಕಮ್ಮರಡಿ ಭಾಗಗಳಲ್ಲಿ ನಿರಂತರ ಮಳೆಯಾಗಿದ್ದು, ಸಾಕಷ್ಟು ಹಾನಿಯಾಗಿದೆ. ಅಡಿಕೆ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ಶಾಸಕರು ತಿಳಿಸಿದರು.
ಈ ಕುರಿತು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಜಂಟಿ ಸಮೀಕ್ಷೆ ಮಾಡಿ, ಹಾನಿಯ ಬಗ್ಗೆ ಸರಿಯಾದ ವರದಿ ನೀಡಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಶೃಂಗೇರಿ ಕ್ಷೇತ್ರದಲ್ಲಿ ಭೂಕುಸಿತ, ರಸ್ತೆ ಕುಸಿತ, ಗುಡ್ಡ ಕುಸಿತದಂತಹ ಅವಘಡಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.
ಗುಡ್ಡೆ ತೋಟದಲ್ಲಿ ಹತ್ತಾರು ಮನೆಗಳು ಅಪಾಯದಂಚಿನಲ್ಲಿವೆ. ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದ್ದು, ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆಯ ಕಾನೂನು ಕ್ರಮಗಳು ಅಡ್ಡಿಯಾಗುತ್ತಿವೆ. ಶೃಂಗೇರಿ ಕ್ಷೇತ್ರದ ಕೆಲವು ತಗ್ಗು ಪ್ರದೇಶಗಳಲ್ಲಿ, ಶಾಶ್ವತ ಯೋಜನೆಯನ್ನು ರೂಪಿಸಿ ಹಾನಿಗೊಳಗಾದವರಿಗೆ ಪರ್ಯಾಯ ಜಾಗವನ್ನು ನೀಡಲು ಮುಂದಾಗಬೇಕಿದೆ ಎಂದು ಶಾಸಕ ರಾಜೇಗೌಡ ಹೇಳಿದರು.
ಮಳೆಯ ಅವಾಂತರದಿಂದ ಇಬ್ಬರು ಸಾವನ್ನಪ್ಪಿದ್ದು, ಮೂರು ಜಾನುವಾರುಗಳು ಮೃತಪಟ್ಟಿವೆ. ಸರ್ಕಾರದಿಂದ 9 ಕೋಟಿ ಹಣ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ತುರ್ತು ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಸರ್ಕಾರ ಹಾಗೂ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.