ಚಿಕ್ಕಮಗಳೂರು:ತರಕಾರಿ ಅಂಗಡಿಯಲ್ಲಿದ್ದ 3 ಸಾವಿರ ರೂಪಾಯಿ ಮೌಲ್ಯದ 40 ಕೆ.ಜಿ. ಟೊಮೆಟೊದ ಎರಡು ಬಾಕ್ಸ್‌ಗಳು ಕಳ್ಳತನವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ನದೀಂ ಎಂಬವರ ಅಂಗಡಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ.
ಮಾಲೀಕ ರಾತ್ರಿ ಎಂದಿನಂತೆ ತರಕಾರಿಯನ್ನು ಅಂಗಡಿಯೊಳಗಿಟ್ಟು ಪ್ಲಾಸ್ಟಿಕ್ ಹಾಳೆ ಮುಚ್ಚಿ ಹೋಗಿದ್ದರು. ಬೆಳಗ್ಗೆ ಬಂದಾಗ ಟೊಮೆಟೊ ಇರಲಿಲ್ಲ. ಆಲ್ದೂರು ಪೊಲೀಸ್ ಠಾಣೆಯ ಕಾಂಪೌಂಡ್‍ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಗೆ ಹೊದಿಸಿದ್ದ ಪ್ಲಾಸ್ಟಿಕ್ ಸರಿಸಿದ್ದರಿಂದ ಕೃತ್ಯ ಗೊತ್ತಾಗಿದೆ. ನದೀಂ ಟೊಮೆಟೊ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಹಾಸನದಲ್ಲೂ ಕಳ್ಳತನ: ಟೊಮೆಟೊ ದುಬಾರಿಯಾಗಿದೆ. ಪ್ರಸ್ತುತ ರೈತರು ಮತ್ತು ವ್ಯಾಪಾರಸ್ಥರಿಗೆ ಉತ್ತಮ ಬೇಡಿಕೆ ಇದೆ. ದರ ಏರಿಕೆಯಾಗುತ್ತಿದ್ದಂತೆ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವಾಗುತ್ತಿದೆ. ಏಕೆಂದರೆ, ಕಳ್ಳರ ಹಾವಳಿಯೂ ಹೆಚ್ಚುತ್ತಿದೆ.
ತಮ್ಮ ಜಮೀನಿನಲ್ಲಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಟೊಮೆಟೊ ಕಳ್ಳತನ ಮಾಡಲಾಗಿದೆ ಎಂದು ಹಾಸನದ ರೈತ ಕುಟುಂಬವೊಂದು ತಿಳಿಸಿತ್ತು. ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಘಟನೆ ನಡೆದಿದ್ದು, ರಾತ್ರೋರಾತ್ರಿ 2 ಎಕರೆ ಜಮೀನಿನಲ್ಲಿದ್ದ ತರಕಾರಿಯನ್ನು ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದರು.
"ಹುರುಳಿ ಬೆಳೆಯಲ್ಲಿ ಅಪಾರ ಹಾನಿ ಅನುಭವಿಸಿದ ನಂತರ ಸಾಲ ಮಾಡಿ ಟೊಮೆಟೊ ಬೆಳೆ ಬೆಳೆದಿದ್ದೇವೆ. ಬೆಂಗಳೂರಿನಲ್ಲಿ ಕೆ.ಜಿಗೆ 120 ರೂಪಾಯಿ ತಲುಪಿದ್ದರಿಂದ ಬೆಳೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಉತ್ತಮ ಫಸಲು ಬಂದಿತ್ತು. ಆದರೆ, ಕಳ್ಳರು 50ರಿಂದ 60 ಚೀಲ ಟೊಮೆಟೊ ತೆಗೆದುಕೊಂಡು ಹೋಗಿದ್ದಾರೆ. ಬೆಳೆಯನ್ನೂ ನಾಶ ಮಾಡಿದ್ದಾರೆ. ಕೆಳಗಡೆ ಜಮೀನಿನಲ್ಲಿ ಸಂಪೂರ್ಣ ಲೂಟಿ ಮಾಡಿದ್ದಾರೆ" ಎಂದು ರೈತರು ಕಣ್ಣೀರು ಹಾಕಿದ್ದರು.
ಇದನ್ನೂ ಓದಿ:ಗ್ರಾಹಕರಿಗೆ ರಿಲೀಫ್... ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ನಾಫೆಡ್, ಎನ್‌ಸಿಸಿಎಫ್‌ಗೆ ಕೇಂದ್ರದ ಸೂಚನೆ..