ಕೊಲೆ ಪ್ರಕರಣದ ಕುರಿತು ಎಸ್ಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದರು. ಚಿಕ್ಕಮಗಳೂರು:ಅವರಿಬ್ಬರು ವರ್ಷದ ಹಿಂದೆ ಮದುವೆ ಆಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಇತ್ತೀಚೆಗಷ್ಟೇ ಒಂದು ವಾರದವರೆಗೆ ದಂಪತಿ ಗೋವಾ ಪ್ರವಾಸ ಕೈಗೊಂಡು ಊರಿಗೆ ಮರಳಿದ್ದರು. ಟ್ರಿಪ್ ಮಾಡಿಕೊಂಡು ಮನೆಗೆ ಬಂದ ಮರು ದಿನವೇ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಿನ್ನೆ (ಮಂಗಳವಾರ) ನಡೆದಿದೆ.
ಮೃತಳನ್ನು 34 ವರ್ಷದ ಶಮಾಭಾನು ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆಗೈದ ಪತಿ ಶಬ್ಬೀರ್ ಅಹಮದ್, ಸೀದಾ ನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಶಬ್ಬೀರ್ ಅಹಮದ್ ತನ್ನ ಪತ್ನಿ ಶಮಾಭಾನು ಜೊತೆ ಗೋವಾ ಪ್ರವಾಸ ಹೋಗಿದ್ದನು. ಒಂದು ವಾರ ಕಾಲ ಗೋವಾದಲ್ಲಿ ಪ್ರವಾಸ ಮುಗಿಸಿ ಬಂದ ಮರುದಿನವೇ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಮನೆಯ ರೂಮಿನ ಗೋಡೆಗಳೆಲ್ಲಾ ರಕ್ತಮಯವಾಗಿದೆ. ಆರೋಪಿ ಶಬ್ಬೀರ್ ಮೊದಲ ಪತ್ನಿ ಕೊರೊನಾದಿಂದ ಸಾವನ್ನಪ್ಪಿದ್ದರು. ಹಿರಿಯ ಪತ್ನಿ ಸಾವಿನ ನಂತರ ಕಳೆದೊಂದು ವರ್ಷದ ಹಿಂದೆ ಶಮಾಭಾನುರನ್ನು ಮದುವೆಯಾಗಿದ್ದ.
ಇದೀಗ, ಆಕೆಯನ್ನು ಕೊಲೆಗೈದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ದಂಪತಿ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದೆ. ಪತ್ನಿ ನನ್ನನ್ನು ತಲೆದಿಂಬಿನಿಂದ ಮುಖಕ್ಕೆ ಮುಚ್ಚಿ ಸಾಯಿಸಲು ಯತ್ನಿಸಿದ್ದಳು. ಅದಕ್ಕೆ ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಶಬ್ಬೀರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಹಾಗೂ ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಸ್ಪಿ ವಿಕ್ರಮ್ ಅಮಟೆ ಹೇಳಿದ್ದೇನು?:''ತನ್ನ ಸಹೋದರಿ ಶಮಾಭಾನು ಅವರನ್ನು ಆಕೆ ಪತಿ ಶಬ್ಬೀರ್ ಅಹಮದ್ ಕೊಲೆ ಮಾಡಿದ್ದಾನೆ ಎಂದು ಸೈಯದ್ ಅಲೀಮ್ ಎಂಬುವರು ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಬ್ಬೀರ್ ಅಹಮದ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಗೆ ಬೇರೆ ಬೇರೆ ಆಯುಧಗಳನ್ನು ಬಳಕೆ ಮಾಡಿರುವುದು ತಿಳಿದುಬಂದಿದೆ. ಈ ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ'' ಎಂದು ಎಸ್ಪಿ ವಿಕ್ರಮ್ ಅಮಟೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೆಲಸದ ಆಮೀಷವೊಡ್ಡಿ ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಅಂದರ್