ಚಿಕ್ಕಮಗಳೂರು: ಕೋಟೆ ಕೆರೆ ರಸ್ತೆ ಬದಿ ಕನ್ನಡಕ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ, ಕನ್ನಡಕಗಳನ್ನು ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಜೀವನ್, ಚಿಕ್ಕಮಗಳೂರು ನಗರದ ರಾಮನಹಳ್ಳಿ ನಿವಾಸಿ ವಿನೋದ್ ಬಂಧಿತ ಆರೋಪಿಗಳು.
ಮಹಿಳೆ ಕೋಟೆ ಕೆರೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಮತ್ತಿನಲ್ಲಿದ್ದ ಯುವಕರು ಕನ್ನಡಕ ಬೇಕೆಂದು ಹೇಳಿ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ಕನ್ನಡಕದ ಹಣ ಕೇಳಿದ್ದಕ್ಕೆ ಕನ್ನಡಕಗಳನ್ನು ಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯ ಮೇಲೂ ದೌರ್ಜನ್ಯ ಮಾಡಿದ್ದಾರೆ. ಬಳಿಕ ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಯುವಕರ ಈ ಕೃತ್ಯವನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಆಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ವ್ಯಾಪಾರಿ ಮೇಲೆ ದೌರ್ಜನ್ಯ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು:ಮತ್ತೊಂದೆಡೆ, ನಿಧಿಗಾಗಿ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ 15 ಅಡಿ ಅಗಲ ಹಾಗೂ 25 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ. ಉಡುಪಿ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಧಿಗಾಗಿ ಶೋಧ ನಡೆಸಿದ ಜಾಗದಲ್ಲಿ ಅರಿಶಿನ-ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ಊದು ಬತ್ತಿ, ಕರ್ಪೂರ, ಮೂರು ತರದ ದಾರ, ಕೋಳಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.