ಕರ್ನಾಟಕ

karnataka

ETV Bharat / state

ಬೈಕ್ ವೀಲಿಂಗ್: ಯುವಕರಿಗೆ ದಂಡ ಬಿಸಿ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಗೇರ್​ ಮರಡಿ ರಸ್ತೆಯಲ್ಲಿ ವೀಲಿಂಗ್​​ ಮಾಡುತ್ತಿದ್ದ ಯುವಕರಿಗೆ ನ್ಯಾಯಾಲಯ ದಂಡ ವಿಧಿಸಿದೆ.

By ETV Bharat Karnataka Team

Published : Sep 15, 2023, 10:58 PM IST

ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ
ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ

ಚಿಕ್ಕಮಗಳೂರು: ಮೋಟಾರ್ ಸೈಕಲ್​ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ಚಿಕ್ಕಮಗಳೂರು ನ್ಯಾಯಾಲಯ ದಂಡ ವಿಧಿಸಿದೆ. ತರೀಕೆರೆಯ ಗೇರ್ ಮರಡಿ ರಸ್ತೆಯಲ್ಲಿ ಅನೇಕ ದಿನಗಳಿಂದ ಕೆಲ ಯುವಕರು ವೀಲಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಪರಿಶೀಲಿಸಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹಿಂಬದಿ ಸವಾರನನ್ನು ಕೂರಿಸಿಕೊಂಡು ಯುವಕರು ವ್ಹೀಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಯುವಕನ ಬೈಕ್ ವಶಕ್ಕೆ ಪಡೆದಿದ್ದರು.

ಐಪಿಸಿ ಕಲಂ 189 ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ವೀಲಿಂಗ್ ಮಾಡುತ್ತಿದ್ದ ಯುವಕನಿಗೆ 5 ಸಾವಿರ ರೂ ದಂಡವನ್ನು ತರೀಕೆರೆಯ ನ್ಯಾಯಾಲಯ ವಿಧಿಸಿದೆ. ಜಿಲ್ಲೆಯ ಹಲವು ಕಡೆ ಯುವಕರ ಬೈಕ್ ವ್ಹೀಲಿಂಗ್ ಹುಚ್ಚಾಟದ ಆರೋಪ ನಿರಂತರವಾಗಿ ಕೇಳಿ ಬರುತ್ತಿತ್ತು. ಹೀಗಾಗಿ, ಇದಕ್ಕೆಲ್ಲ ಬ್ರೇಕ್ ಹಾಕಲು ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಠಾಣೆಯ ಪೊಲೀಸರು ಮುಂದಾಗಿದ್ದು, ಬೈಕ್ ವೀಲಿಂಗ್ ಮಾಡುವಂತಹ ಯುವಕರಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆಯೂ ಪೊಲೀಸರು ನಿಗಾ ವಹಿಸಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬೈಕ್ ವೀಲಿಂಗ್ ಮಾಡುವ ಪುಂಡರ ಮೇಲೆ ನಿರಂತರವಾಗಿ ಪೊಲೀಸರು ಹದ್ದಿನ ಕಾರ್ಯಾಚರಣೆ ಮುಂದುವರೆಸಿದ್ದು, ವೀಲಿಂಗ್ ಮಾಡುವ ಪುಂಡರಿಗೆ ಪೊಲೀಸರು ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.

ಸೈಲೆನ್ಸರ್​ಗಳ ಮೇಲೆ ಬುಲ್ಡೋಜರ್ ಸವಾರಿ: ಬೈಕ್ ವ್ಹೀಲಿಂಗ್ ಮಾಡಿ ಪುಂಡಾಟಿಕೆ ತೋರಿದವರಿಗೆ ಕಾಫಿನಾಡಿನ ಪೊಲೀಸರು ಚಳಿ ಬಿಡಿಸಿದ್ದರು. ವ್ಹೀಲಿಂಗ್ ಶೋಕಿ ಮಾಡಿದವರಿಗೆ ಪೊಲೀಸರು ಬುಲ್ಡೋಜರ್ ಟ್ರೀಟ್ಮೆಂಟ್ ನೀಡಿದ್ದು, ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್​ಗಳನ್ನ ಪೊಲೀಸರು ಪುಡಿ ಪುಡಿ (ಜೂನ್​ 27-2022) ಮಾಡಿದ್ದರು.

ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸರಿಂದ ಸೈಲೆನ್ಸರ್ ಉಡೀಸ್‌ ಕಾರ್ಯ ನಡೆದಿತ್ತು. ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಯುವಕರು ಬೈಕ್ ವ್ಹೀಲಿಂಗ್ ಮಾಡಿದ್ದರು. ಯುವಕರ ವ್ಹೀಲಿಂಗ್ ಹುಚ್ಚಾಟಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆ ವ್ಹೀಲಿಂಗ್ ಹುಚ್ಚಾಟದ ಬಗ್ಗೆ ವಿಡಿಯೋ ಮಾಡಿ ಎಸ್​ಪಿಗೆ ಕಳುಹಿಸಿದ್ದರು.

ಎಸ್ಪಿ ಸೂಚನೆ ಮೇರೆಗೆ ಕೂಡಲೇ ಬೈಕ್​ಗಳನ್ನು ಪೊಲೀಸರು ಸೀಜ್ ಮಾಡಿ, ಇದೀಗ ಸೈಲೆನ್ಸರ್​​ಗಳ ಮೇಲೆ ಬುಲ್ಡೋಜರ್ ಹತ್ತಿಸಿ ನಾಶಪಡಿಸಿದ್ದರು. ಹಾಗೆ ರಸ್ತೆಯಲ್ಲಿ ವಾಹನ ಸವಾರರ ಆಫ್​ ‌ಹೆಲ್ಮೆಟ್​ಗಳನ್ನ ವಶಪಡಿಸಿಕೊಂಡು ಅವನ್ನೂ ನಾಶ ಮಾಡಿದ್ದರು.

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ವೀಲಿಂಗ್​ ಹಾವಳಿ : ಬೆಂಗಳೂರಿನಲ್ಲಿ ವೀಲಿಂಗ್ ಹಾವಳಿ ಮತ್ತೆ ತಲೆ ಎತ್ತಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಮೂರು ದ್ವಿಚಕ್ರ ವಾಹನಗಳಲ್ಲಿ ಪುಂಡರು ವೀಲಿಂಗ್ ಮಾಡುವ ದೃಶ್ಯ ಮೊಬೈಲ್​ನಲ್ಲಿ (ಜೂನ್​ 24-2022) ಸೆರೆಯಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ವಾಹನ ದಟ್ಟಣೆ ಇರುವ ವೇಳೆಯಲ್ಲೇ ಪುಂಡರು ವೀಲಿಂಗ್​ ಮಾಡುವ ಮೂಲಕ ಹುಚ್ಚಾಟ ಪ್ರದರ್ಶಿಸಿದ್ದರು.

ಅಷ್ಟೇ ಅಲ್ಲ ಇವರು ಹೆಲ್ಮೆಟ್ ಧರಿಸದೇ ಒವರ್ ಸ್ಪೀಡ್ ಆಗಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನಗಳನ್ನ ಓಡಿಸಿದ್ದರು. ಯುವಕರ ಹುಚ್ಚಾಟದಿಂದ ಇತರೇ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿತ್ತು. ರೀಲ್ಸ್ ಶೋಕಿಗಾಗಿ ನಕಲಿ ನಂಬರ್ ಪ್ಲೇಟ್​ ಅಳವಡಿಸಿಕೊಂಡು ಯುವಕರು ವೀಲಿಂಗ್ ಮಾಡ್ತಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ವೀಲಿಂಗ್​ ಹಾವಳಿ

ABOUT THE AUTHOR

...view details