ಕಲಬುರಗಿ:ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹೋಮ - ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಂಸಾಹಾರ ಮಾಡಿರೋದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿ.ಟಿ ರವಿ, ದತ್ತಪೀಠ ಆವರಣದಲ್ಲಿ ಮಾಂಸಾಹಾರ ಅಡುಗೆ ಮಾಡಿ, ಸೇವನೆ ಮಾಡಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಅಲ್ಲಿನ ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕಳುಹಿಸಿ ಮಾಹಿತಿ ಕೇಳಿದ್ದೇನೆ. ಮಾಂಸಾಹಾರ ಮಾಡಿರೋದು ಅಕ್ಷಮ್ಯ ಅಪರಾಧ, ಅಲ್ಲಿನ ಜವಾಬ್ದಾರಿ ಯಾರಿಗೆ ನೀಡಲಾಗಿತ್ತೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರ ಕುಮ್ಮಕ್ಕು ಇದ್ದರೂ ಕೂಡ ಅಲ್ಲಿ ಆ ರೀತಿ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ ಆಗಿತ್ತು ಎಂದರು.