ಚಿಕ್ಕಮಗಳೂರು: ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ಶಾಸಕ ಎಂ.ಪಿ.ಕುಮಾರಸ್ವಾಮಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಸಿಕೊಡಲು ಮುಂದಾಗಿದ್ದಾರೆ.
ಬಂಕೇನಹಳ್ಳಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭ - temporary bridge at Bunkenahalli
ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಸೇತುವೆ ಕೊಚ್ಚಿ ಹೋಗಿತ್ತು. ಬಳಿಕ ಪರಿಶೀಲನೆಗೆ ಆಗಮಿಸಿದ್ದ ಸಂಸದೆ, ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋದ ವೇಳೆ ಪರಿಶೀಲನೆಗಾಗಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಸ್ಥಿತಿ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಬಂಕೇನಹಳ್ಳಿ ಗ್ರಾಮಸ್ಥರು ಸಂಸದೆ, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಂಕೇನಹಳ್ಳಿ ಜನರ ಆಕ್ರೋಶಕ್ಕೆ ಮಣಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಗ್ರಾಮದಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿಸಿಕೊಡಲು ಮುಂದಾಗಿದ್ದಾರೆ.
ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಗೆ ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿದ್ದು, ಅಲ್ಲಿನ ಗ್ರಾಮಸ್ಥರಿಗೆ ಸಂಪರ್ಕವೇ ಸಂಪೂರ್ಣ ಕಡಿತವಾಗಿತ್ತು. ಇದರಿಂದ ಐದು ಹಳ್ಳಿಗಳ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ಇದೀಗ ಬಂಕೇನಹಳ್ಳಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಈ ಕಾರ್ಯಕ್ಕೆ ಬಂಕೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.