ಚಿಕ್ಕಮಗಳೂರು:ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಅಸಂಘಟಿತ ಕಾರ್ಮಿಕರ ಘಟಕದಿಂದ ಚಿಕ್ಕಮಗಳೂರು ನಗರದಲ್ಲಿ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಎತ್ತಿನ ಗಾಡಿಯ ಮೇಲೆ ಏರಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಸೂದೆಗಳ ವಿರೋಧಿಸಿ ಎತ್ತಿನ ಗಾಡಿ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ರೈತರ ಜಮೀನಿನಲ್ಲಿ ರೈತರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ಮಾಡಿವೆ. ಕಾರ್ಪೋರೇಟರ್ಗಳಿಗೆ ಅನುಕೂಲವಾಗುವಂತಹ ಈ ಕಾಯ್ದೆಯನ್ನು ತಕ್ಷಣವೇ ಕೈಬಿಡಬೇಕು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಆದಾಯ ಭದ್ರತೆಗೆ ಮಾತ್ರವಲ್ಲ, ದೇಶದ ಆಹಾರ ಭದ್ರತೆಯ ಬುಡಕ್ಕೆ ಕೊಡಲಿ ಪೆಟ್ಟು ನೀಡಲಿದೆ.
ಈಗಾಗಲೇ ಲಾಕ್ಡೌನ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಮಾಡದೆ, ರೈತರಿಗೆ ಬೆಂಬಲ ಬೆಲೆ ಘೋಷಿಸದೆ, ತರಾತುರಿಯಲ್ಲಿ ಇದನ್ನು ಜಾರಿ ಮಾಡಿ ರೈತರಿಗೆ ಮತ್ತು ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.