ಚಿಕ್ಕಮಗಳೂರು:ಕಾಂಗ್ರೆಸ್ ಹತಾಶೆಯಾಗಿ ಉಚಿತಗಳ ಮಹಾಪೂರವನ್ನೇ ಹರಿಸುತ್ತಿದೆ. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಅನ್ನೋದಕ್ಕೆ ಇತಿಹಾಸವೇ ಸಾಕ್ಷಿ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಕಾಫಿನಾಡಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿ ಕೆ. ಎನ್ ರಮೇಶ್ ದ್ವಜಾರೋಹಣ ನೆರವೇರಿಸಿದ್ದು, ನಗರದ ಸುಭಾಷ್ ಚಂದ್ರಬೋಸ್ ಮೈದಾನದಲ್ಲಿ ಪೊಲೀಸ್, ಎನ್ಸಿಸಿ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ರಾಹುಲ್ ಗಾಂಧಿ ನೀಡಿದ ಭರವಸೆಯನ್ನೇ ಈಡೇರಿಸಿಲ್ಲ: ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ ಟಿ ರವಿ, ರಾಜ್ಯದ ಜನರಿಗೆ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ರಾಜಸ್ಥಾನದ ಚುನಾವಣೆ ಪ್ರಚಾರದ ವೇಳೆ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿ ಸಾಲಮನ್ನಾ ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನೀಡಿದ ಭರವಸೆಯನ್ನೇ ಈಡೇರಿಸಿಲ್ಲ ಎಂದರು.
ಪದ್ಮಶ್ರೀ ಪ್ರಶಸ್ತಿ ಪೀಪಲ್ ಪ್ರಶಸ್ತಿಯಾಗಿದೆ:ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ರಾಜ್ಯದಲ್ಲಿ ಬಿಜೆಪಿಗೆ ನಿಚ್ಚಳವಾದ ಬಹುಮತ ಬರುವ ವಿಶ್ವಾಸವಿದೆ. ಕಾಂಗ್ರೆಸ್ ರಾಜ್ಯದಲ್ಲೂ ಮುಂಬರುವ ಚುನಾವಣೆಗಾಗಿ ಸುಳ್ಳು ಭರವಸೆ ನೀಡುತ್ತಿದೆ. ಹೆಸರು ಪ್ರಜಾಧ್ವನಿ ಯಾತ್ರೆ. ಆದರೆ ಮಾಡುತ್ತಿರುವುದು ಪ್ರಜಾದ್ರೋಹದ ಕೆಲಸ ಎಂದು ಹೇಳಿದರು. ನಂತರ ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ - ಗರಿಮೆ ಹೆಚ್ಚಾಗಿದೆ. ಈಗ ಪದ್ಮಶ್ರೀ ಪ್ರಶಸ್ತಿ ಪೀಪಲ್ ಪ್ರಶಸ್ತಿಯಾಗಿದೆ. ಈ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ದೊಡ್ಡ ಲಾಭಿ ನಡೆಯುತ್ತಿತ್ತು. ಈಗ ಜನರ ಭಾವನೆಯಿಂದ ಹೆಸರು ವಾಸಿಯಾಗಿರುವವರಿಗೆ ಪ್ರಶಸ್ತಿ ಸಿಕ್ಕಿದೆ ಎಂದರು.