ಕಳಪೆ ರಸ್ತೆ ಕಾಮಗಾರಿ ಆರೋಪ: ಸಾರ್ವಜನಿಕರ ಆಕ್ರೋಶ.. ಚಿಕ್ಕಮಗಳೂರು: ಇತ್ತೀಚೆಗಷ್ಟೇ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ದುಃಸ್ಥಿತಿಗೆ ತಲುಪಿದೆ. ಕಳಪೆ ಕಾಮಗಾರಿಯಿಂದ ಜನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ ಕೆಲವೇ ದಿನಗಳಲ್ಲಿ ಹಳ್ಳ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕವನ ಹಳ್ಳ, ಮಾವಿನಹೊಲ, ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳಾಗಿವೆ.
ಈ ಗ್ರಾಮಗಳಿಗೆ ಹೊರನಾಡು ಗ್ರಾಮದಿಂದ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ ಉದ್ದದ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಹೀಗಾಗಿ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಹೊರನಾಡು ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರದ ಶಾಸಕ ಕುಮಾರ ಸ್ವಾಮಿ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು.
3.50 ಲಕ್ಷ ರೂ. ಅನುದಾನ:ಮನವಿ ಹಿನ್ನೆಲೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ ವರ್ಷ ಜನವರಿ ತಿಂಗಳಲ್ಲಿ ಈ ರಸ್ತೆಯ ಅಭಿವೃದ್ಧಿಗಾಗಿ ಸುಮಾರು 3.50 ಲಕ್ಷ ರೂ. ಅನುದಾನ ನೀಡಿದ್ದರು. ಅದರಂತೆ ಹೊರನಾಡು ಗ್ರಾಮದಿಂದ ಮಾವಿನಹೊಲ, ಮಣ್ಣಿನಪಾಲ್, ಕವನಹಳ್ಳ ಗ್ರಾಮಗಳವರೆಗಿನ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆದಾರರು ಜವವರಿಯಿಂದ ಮೇ ತಿಂಗಳವರೆಗೆ ಕಾಮಗಾರಿ ನಡೆಸಿ ಕೆಲಸ ಪೂರ್ಣಗೊಳಿಸಿದ್ದರು.
ಇತ್ತೀಚೆಗಷ್ಟೆ ವಾಹನ ಸಂಚಾರಕ್ಕೆ ಮುಕ್ತ:ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಬಿಜೆಪಿ ಮುಖಂಡರು ಸ್ಥಳೀಯರಿಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೇ ಬ್ಯಾರಿಕೇಡ್ ಅಡ್ಡ ಇಟ್ಟು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರು. ನಂತರ ಜನರ ಆಕ್ರೋಶದಿಂದಾಗಿ ರಸ್ತೆಗೆ ಅಡ್ಡ ಇಡಲಾಗಿದ್ದ ಬ್ಯಾರಿಕೇಡ್ ತೆರವು ಮಾಡಲಾಗಿತ್ತು. ಇತ್ತೀಚೆಗೆ ಈ ರಸ್ತೆ ಗ್ರಾಮಸ್ಥರು ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿತ್ತು. ಸಂಚಾರಕ್ಕೆ ಮುಕ್ತಗೊಂಡ ಕೆಲವೇ ದಿನಗಳಲ್ಲಿ ಈ ಕಾಂಕ್ರಿಟ್ ರಸ್ತೆಯ ಗುಣಮಟ್ಟ ಜಗಜ್ಜಾಹೀರಾಗುತ್ತಿದೆ.
ಗ್ರಾಮಸ್ಥರ ಆಕ್ರೋಶ: ಕಳಪೆ ಕಾಮಗಾರಿ ಮಾಡಿರುವುದರಿಂದ ರಸ್ತೆಗೆ ಹಾಕಿರುವ ಕಾಂಕ್ರಿಟ್ ಬರೀಗೈಲಿ ಕಿತ್ತು ಬರುತ್ತಿದೆ. ರಸ್ತೆಯುದ್ದಕ್ಕೂ ಕಾಂಕ್ರಿಟ್ ಗೆ ಬಳಸಿದ್ದ ಜಲ್ಲಿ ಕಲ್ಲುಗಳ ರಾಶಿ ಬಿದ್ದಿದೆ. ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರ ಸಂಚಾರಕ್ಕೂ ತೊಂದರೆಯಾಗಿದೆ. ಮೂರೂವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಅಸಲಿಯತ್ತಿನ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಯಲ್ಲೇ ಕಿತ್ತು ಬರ್ತಿದೆ ಡಾಂಬರು..:ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಚೇಂಗಟಾ ಗ್ರಾಮದಿಂದ ದುತ್ತರಗಿ ಗ್ರಾಮದವರೆಗೆ ಜಿಲ್ಲಾ ಪಂಚಾಯತ್, ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಎರಡು ಕಿಲೋ ಮೀಟರ್ ರಸ್ತೆ ನಿರ್ಮಿಸಿದೆ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು. ಕಾಮಗಾರಿ ಹೆಸರಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಕೋಟಿ ಕೋಟಿ ರೂ ಹಣ ನುಂಗಿ ನೀರು ಕುಡಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.
ಇದನ್ನೂ ಓದಿ:ಕೈಯಲ್ಲೇ ಕಿತ್ತು ಬರ್ತಿದೆ ಡಾಂಬರು..! ಕಳಪೆ ಕಾಮಗಾರಿ ವಿರುದ್ಧ ಜನರ ಆಕ್ರೋಶ