ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ನಗರದಲ್ಲಿರುವ ಕಾಫಿ ಮಂಡಳಿ ಕಚೇರಿಯನ್ನು ಮುಚ್ಚಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ನೂರಾರು ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಸುರೇಶ್ ಆಲ್ದೂರು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ಬಸ್ ಸ್ಟ್ಯಾಂಡ್ ಮುಂಭಾಗದ ವೃತ್ತದಿಂದ ಪ್ರತಿಭಟನೆ ಆರಂಭಗೊಂಡಿತು. 'ಕಾಫಿ ಮಂಡಳಿ ಉಳಿಸಿ, ಕಾಫಿ ಉದ್ಯಮ, ಬೆಳೆಗಾರರು ಮತ್ತು ಕಾರ್ಮಿಕರನ್ನು ರಕ್ಷಿಸಿ' ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದ ನೂರಾರು ಕಾಫಿ ಬೆಳೆಗಾರರು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಸುರೇಶ್, ಕಾಫಿ ಮಂಡಳಿ ಕಚೇರಿಗಳನ್ನು ಮುಚ್ಚಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಕಾಫಿ ಉದ್ಯಮವನ್ನು ಮತ್ತು ಬೆಳೆಗಾರರ ಬದುಕನ್ನು ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು. ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು, ಸದ್ಯದಲ್ಲೇ ಚಿಕ್ಕಮಗಳೂರು, ಹಾಸನ, ಕೊಡಗಿಗೂ ಹೋರಾಟವನ್ನು ವಿಸ್ತರಿಸಲಾಗುವುದು ಎಂದರು.
ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ. ವಿಜಯ್ ಮಾತನಾಡಿ, ಕೇಂದ್ರ ಸರ್ಕಾರದ ನಡೆ ವಿರುದ್ಧ ಬೆಳೆಗಾರರು ಪಕ್ಷಾತೀತವಾಗಿ ಒಂದಾಗಬೇಕು. ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.