ಚಿಕ್ಕಮಗಳೂರು: ಕಾಫಿ ತೋಟದಲ್ಲಿರುವ ಕಾರ್ಮಿಕರಿಗೆ ಸರಿಯಾದ ಸಂಬಳ ನೀಡದೇ, ಬ್ಯಾಂಕಿನಲ್ಲಿ ಪಡೆದ ಕೋಟ್ಯಂತರ ರೂ. ಸಾಲ ಮರು ಪಾವತಿ ಮಾಡದೇ, ಕಾಫಿ ತೋಟದ ಮಾಲೀಕ ಊರು ಬಿಟ್ಟಿದ್ದಾನೆ. ಈಗ ಸಾಲ ನೀಡಿದ ಬ್ಯಾಂಕ್ ಕಾಫಿ ತೋಟವನ್ನು ಸೀಜ್ ಮಾಡಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಗೆ ಬಂದಿರುವ ಘಟನೆ ಜಿಲ್ಲೆಯ ಹಿರೇಕೊಳಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:ಜಿಲ್ಲೆಯ ಹಿರೇಕೊಳಲೆಯ ವಾಟೇಖಾನ್ ಎಸ್ಟೇಟ್ ಮಾಲೀಕ ರಮೇಶ್ ರಾವ್ ಯೂನಿಯನ್ ಬ್ಯಾಂಕ್ ನಲ್ಲಿ ಸಾಲ ಪಡೆದು ಊರು ಬಿಟ್ಟಿದ್ದಾನೆ. ಬ್ಯಾಂಕ್ ಎಷ್ಟೇ ನೋಟಿಸ್ ನೀಡಿದ್ರೂ ಆತ ಮಾತ್ರ ತಲೆಕೆಡಿಸಿಕೊಂಡಿಲ್ಲ. ನೋಡೋ ತನಕ ನೋಡಿದ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೂಲಕ ಕಾಫಿ ಎಸ್ಟೇಟ್ ಜಪ್ತಿ ಆದೇಶ ತಂದು ಎಸ್ಟೇಟ್ ಮೇಲೆ ದಾಳಿ ನಡೆಸಿದ್ದಾರೆ.
ಕಂಗಲಾದ ಕಾರ್ಮಿಕರು:ಬಿಗಿ ಪೊಲೀಸ್ ಬಂದ್ ಬಸ್ತ್ ಜೊತೆ ಕಾಫಿ ಎಸ್ಟೇಟ್ ಗೆ ದಾಳಿ ಮಾಡಿದ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನ ಕಂಡ ಕಾರ್ಮಿಕರು ಒಮ್ಮೆಲೆ ಕಂಗಲಾಗಿ ಹೋಗಿದ್ದಾರೆ. ನೀವು ಈ ಕೂಡಲೇ ಮನೆ ಖಾಲಿ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದಾಗ ಕಾರ್ಮಿಕರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.