ಚಿಕ್ಕಮಗಳೂರು:ವರ್ಷದಿಂದ ವರ್ಷಕ್ಕೆ ಕಾಫಿ-ಮೆಣಸು ಬೆಳೆಗಾರರ ಸಮಸ್ಯೆ ಹೆಚ್ಚಾಗುತ್ತಲೇ ಇವೆ. ಸರ್ಕಾರದ ಆಶ್ವಾಸನೆ ಹಾಗೂ ಸಮರ್ಪಕ ಯೋಜನೆಗಳ ಕೊರೆಯಿಂದ ನಲುಗಿರುವ ಈ ಬೆಳೆಗಾರರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಷ್ಟ ಅನುಭವಿಸುತ್ತಿರುವುದು ನೋವಿನ ಸಂಗತಿ. ವರ್ಷದಿಂದ ವರ್ಷಕ್ಕೆ ಕಾಫಿಯ ದರ ಕುಂಠಿತಗೊಳುತ್ತಿರುವಿದರಿಂದ ಕಾಫಿಯನ್ನೇ ಆಶ್ರಯಿಸಿರುವ ಕೊಡಗು, ಹಾಸನ, ಚಿಕ್ಕಮಗಳೂರಿಗರ ಉತ್ಸಾಹ ಕುಗ್ಗಿಸಿದೆ. ಬರುವ ಸರ್ಕಾರ ಭರವಸೆ ನೀಡುತ್ತವೆಯಾದರೂ ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರದ ಹಿನ್ನೆಲೆ ಈ ಸಂಕಷ್ಟ ನಿರಂತರ ಎನ್ನುವಂತಾಗಿದೆ.
ಕಾಡುತ್ತಿರುವ ಕಾರ್ಮಿಕರ ಕೊರತೆ: ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಮತ್ತು ಮೆಣಸು ಬೆಳೆಯಲಾಗುತ್ತದೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೆಣಸು ಕೊಚ್ಚಿ ಹೋಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರಿತ್ಯ, ಕಟಾವಿಗೆ ಕಾರ್ಮಿಕರ ಕೊರತೆ, ಅವಧಿಗೂ ಮುನ್ನವೇ ಹಣ್ಣಾಗಿ ಗಾಳಿ-ಮಳೆಗೆ ಉದುರುವುದು, ಬೆಲೆ ಏರಿಳಿತ, ರಾಸಾಯನಿಕ ಗೊಬ್ಬರಗಳ ಬೆಲೆ ಹೆಚ್ಚಳ, ವಿದ್ಯುತ್ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಈ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೂಡಿಗೆರೆ, ಚಿಕ್ಕಮಗಳೂರು, ಕಳಸ ಸೇರಿದಂತೆ ಹಾಸನ, ಕೊಡಗು ಜಿಲ್ಲೆಗಳಲ್ಲೂ ಇದೇ ಸಮಸ್ಯೆ. ಅಂದಾಜಿನ ಪ್ರಕಾರ ಎಕರೆ ಕಾಫಿ ಬೆಳೆ ಬೆಳೆಯಲು 70 ಸಾವಿರ ಖರ್ಚು ಮಾಡಲಾಗುತ್ತಿದ್ದು ಬೆಳೆದ ಬೆಳೆಗೆ ಕೇವಲ 30 ಸಾವಿರ ಮಾತ್ರ ಸಿಗುತ್ತಿರುವುದು ದುರ್ದೈವದ ಸಂಗತಿ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಆಳುವ ಸರ್ಕಾರಗಳು ಮಾತ್ರ ಮೌನ ವಹಿಸಿರುವುದು ನೋವಿನ ಸಂಗತಿ ಎನ್ನುತ್ತಾರೆ ಇಲ್ಲಿನ ಕಾಫಿ-ಮೆಣಸು ಬೆಳೆಗಾರರು.
ದೇಶ ವಿದೇಶದಲ್ಲೂ ಹಬ್ಬಿದ ಕಾಫಿ ಘಮ:ರಾಜ್ಯದ ಕಾಫಿಯ ಘಮಲು ದೇಶ-ವಿದೇಶದಲ್ಲೂ ಪಸರಿಸಿದೆ. ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿದೆ. ಆದರೆ, ಕೆಲ ವರ್ಷಗಳಿಂದ ಕೊಳೆರೋಗ, ಬೋರರ್, ಮಾರುಕಟ್ಟೆ ಅನಿಶ್ಚಿತತೆ, ಉತ್ಪಾದನಾ ವೆಚ್ಚ ಏರಿಕೆ, ಬೆಲೆಯಲ್ಲಿ ಗಣನೀಯ ಇಳಿಕೆ ಹೀಗೆ ಹತ್ತು-ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಮಳೆಯಂತೂ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕಾಫಿಗೆ ಮಾತ್ರವಲ್ಲ ಕಪ್ಪುಚಿನ್ನ ಎಂದು ಕರೆಸಿಕೊಳ್ಳುವ ಕಾಳು ಮೆಣಸು ಕೃಷಿಗೂ ಈ ಬಿಸಿ ತಟ್ಟಿದೆ. ಗಾಳಿ ಮಳೆಯಿಂದ ಬಳ್ಳಿಗಳು ನೆಲಕ್ಕೆ ಉರುಳಿದರೆ, ಕೆಲವಡೆ ಕಾಯಿ ಕಟ್ಟುತ್ತಿಲ್ಲ. ಹಲವಡೆ ರೋಗ ಬಾಧೆ ಬೇರೆ ಆವರಿಸುತ್ತದೆ. ಈಗ ಬೇಸಿಗೆ ಇರುವುದರಿಂದ ಬೆಳೆಗೆ ನೀರು ಬೇಕು. ಆದರೆ, ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗೆ, ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಕಾಫೀ ಉದ್ಯಮದ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಆಳುವ ಸರ್ಕಾರಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಕಾಫಿ ಬೆಳಗಾರಾದ ಹುಲ್ಲೇ ಮನೆ ಚಂದ್ರು ಅಳಲು ತೋಡಿಕೊಂಡರು.
ಸಕಾಲಕ್ಕೆ ಮಳೆ ಬರುವುದಿಲ್ಲ. ಮಳೆ ಬಂದರೆ ಸರಿಯಾದ ಸಮಯಕ್ಕೆ ನಿಲ್ಲುವುದಿಲ್ಲ. ಮಳೆಗಾಲದಲ್ಲಿ ಕಾಫಿ ಗಿಡಗಳು ಕೊಚ್ಚಿ ಹೋದರೆ ಬೇಸಿಗೆ ಕಾಲದಲ್ಲಿ ಸುಟ್ಟು ಹೋಗುತ್ತಿದೆ. ಕೆರೆಗಳಲ್ಲಿ ನೀರು ಸಂಗ್ರಹ ಕಡಿಮೆಯಾಗುತ್ತಿದೆ. ಸರ್ಕಾರ 10 ಹೆಚ್ಪಿ ವರೆಗೂ ವಿದ್ಯುತ್ ಉಚಿತ ನೀಡುತ್ತದೆ ಎಂಬ ಭರವಸೆ ನೀಡಿತ್ತು. ಆ ಆದೇಶ ಮಾತ್ರ ಇನ್ನು ಹೊರಡಿಸಿಲ್ಲ. ಸರ್ಕಾರ ಕಾಫಿಯನ್ನು ರಾಷ್ಟ್ರೀಕರಣ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಮ್ಮಂತಹ ಬೆಳೆಗಾರರಿಗೆ ಇವುಗಳು ಅರ್ಥವಾಗುವುದಿಲ್ಲ. ನಮಗೆ ಬೇಕಿರುವುದು ಸಾಮಾನ್ಯ ಬೇಡಿಕೆಗಳು. ಸರ್ಕಾರ ನಮ್ಮನ್ನು ಉಳಿಸಬೇಕು. ವಿದ್ಯುತ್ ಉಚಿತವಾಗಿ ನೀಡುವುದರ ಮೂಲಕ ನಮ್ಮ ಬಾಳನ್ನು ಬೆಳಕಾಗಿಸಬೇಕು.