ಕರ್ನಾಟಕ

karnataka

ETV Bharat / state

ಮಳೆಗಾಲದಲ್ಲಿ ಮುಳುಗಡೆಯಾಗುವ ಹೆಬ್ಬಾಳೆ ಸೇತುವೆ.. ಸುತ್ತಮುತ್ತಲ ಹಳ್ಳಿಯ ಜನರಿಗೆ ಸಂಕಷ್ಟ - hebbale bridge news

ಪ್ರಮುಖವಾಗಿ ಈ ಸೇತುವೆಗೆ ಯಾವುದೇ ರೀತಿಯ ತಡೆಗೋಡೆಗಳಿಲ್ಲ. ರಾತ್ರಿ ವೇಳೆ ವಾಹನಗಳ ಚಾಲನೆಯಲ್ಲಿ ಸ್ವಲ್ಪ ಜಾಗೃತೆ ತಪ್ಪಿದ್ರೂ, ದೊಡ್ಡ ಅನಾಹುತವೇ ಆಗಲಿದೆ. ಈ ಸೇತುವೆ ಮೇಲೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳು ಹೆಚ್ಚು..

hebbale bridge
ಹೆಬ್ಬಾಳೆ ಸೇತುವೆ

By

Published : Nov 10, 2020, 4:23 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾದ್ರೆ ಸಾಕು ಭದ್ರಾ ನದಿ ಉಕ್ಕಿ ಹರಿಯಲು ಪ್ರಾರಂಭವಾಗುತ್ತದೆ. ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ, ಮಳೆಗಾಲದಲ್ಲಿ ದಿನಕ್ಕೆ ಐದರಿಂದ, ಆರು ಬಾರಿ ಮುಳುಗಡೆಯಾಗುತ್ತದೆ.

ಹೆಬ್ಬಾಳೆ ಸೇತುವೆಯನ್ನು ಮೇಲಕ್ಕೆ ಎತ್ತರಿಸಲು ಸ್ವಾಮೀಜಿಗಳ ಒತ್ತಾಯ..

ಆಗಸ್ಟ್ ತಿಂಗಳು ಬಂದರೆ ಜಿಲ್ಲೆಯ ಸುತ್ತಮುತ್ತಲ ಹಳ್ಳಿಯ ಜನರಿಗೆ ನರಕಯಾತನೆ. ಈ ಸೇತುವೆ ಸಂಪೂರ್ಣ ಮುಳುಗಡೆ ಆಗುವುದರಿಂದ ಯಾರು ಎಲ್ಲಿಯೂ ಹೋಗದ ಸ್ಥಿತಿ ನಿರ್ಮಾಣವಾಗುತ್ತದೆ. ಆ ಸಂದರ್ಭದಲ್ಲಿ ಈ ಸೇತುವೆ ಮೇಲೆ ಯಾವುದೇ ವ್ಯಕ್ತಿ, ವಾಹನಗಳು ಸಂಚರಿಸಲ್ಲ. ಈ ಸೇತುವೆಯು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ.

ಒಂದು ವೇಳೆ ಈ ಸೇತುವೆ ಕುಸಿದು ಬಿದ್ದರೆ ದೊಡ್ಡ ಅನಾಹುತ ಆಗುವ ಸಾಧ್ಯತೆಯೂ ಹೆಚ್ಚಿದೆ. ಈ ಭಾಗದ ಸ್ಥಳೀಯರು ಹಾಗೂ ಸುತ್ತಮುತ್ತಲ ಹಳ್ಳಿಯ ಜನ, ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಷ್ಟೇ ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರಮುಖವಾಗಿ ಈ ಸೇತುವೆಗೆ ಯಾವುದೇ ರೀತಿಯ ತಡೆಗೋಡೆಗಳಿಲ್ಲ. ರಾತ್ರಿ ವೇಳೆ ವಾಹನಗಳ ಚಾಲನೆಯಲ್ಲಿ ಸ್ವಲ್ಪ ಜಾಗೃತೆ ತಪ್ಪಿದ್ರೂ, ದೊಡ್ಡ ಅನಾಹುತವೇ ಆಗಲಿದೆ. ಈ ಸೇತುವೆ ಮೇಲೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳು ಹೆಚ್ಚು.

ಈ ರಸ್ತೆ ಬಗ್ಗೆ ಅರಿವಿಲ್ಲದೆ ಬರುವ ಹೊಸ ಪ್ರವಾಸಿಗರೇ ಹೆಚ್ಚು ಅನಾಹುತಕ್ಕೆ ತುತ್ತಾಗಿದ್ದಾರೆ. ಇನ್ನು, ಪ್ರತಿ ವರ್ಷ ಮಳೆಗಾಲದಲ್ಲಿ ಈ ಸೇತುವೆ ಮುಳುಗಡೆಯಾದ್ರೆ ಸುಮಾರು 10ರಿಂದ 15 ಕಿ.ಮೀ. ದೂರ ಬಳಸಿಕೊಂಡು ದೇವಸ್ಥಾನಕ್ಕೆ ಹೋಗ ಬೇಕಾಗುತ್ತದೆ.

ಸುಮಾರು ಎಂಟು ತಿಂಗಳ ಕಾಲ ಈ ಸೇತುವೆ ಕೆಳ ಭಾಗದಲ್ಲಿ ಹರಿಯುವ ಭದ್ರೆ, ಮಳೆಗಾಲದಲ್ಲಿ ಮಾತ್ರ ಸೇತುವೆ ಮೇಲೆ ತನ್ನ ರೌದ್ರಾವತಾರ ತೋರಿಸುತ್ತಾಳೆ. ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಗಳು ನಡೆಯುವ ಮೊದಲೇ, ಸರ್ಕಾರ ಇತ್ತ ಗಮನ ಹರಿಸಿ ಈ ಸೇತುವೆಯನ್ನು ಮೇಲಕ್ಕೆತ್ತರಿಸುವ ಕೆಲಸ ಮಾಡಬೇಕಿದೆ.

ABOUT THE AUTHOR

...view details