ಚಿಕ್ಕಮಗಳೂರು: ನಮ್ಮಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನವಿದೆ. ಆದ್ರೆ ಕಾಫಿನಾಡಿನಲ್ಲಿ ಗೋವು ಕಳ್ಳರ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಸಾಕಲು ಆಗುವುದಿಲ್ಲವೆಂಬ ಕಾರಣಕ್ಕೆ ಕಸಾಯಿಖಾನೆಗೆ ಹಸುಗಳನ್ನು ಮಾರುವವರ ಸಂಖ್ಯೆಯೂ ಹೆಚ್ಚಿತ್ತು. ಹೀಗೆ ಮಲೆನಾಡಿನಲ್ಲಿ ಕಸಾಯಿಖಾನೆ ಪಾಲಾಗುತ್ತಿದ್ದ ಗೋವುಗಳನ್ನು ರಕ್ಷಿಸಿ ಪೋಷಿಸುವ ಕೆಲಸವನ್ನು ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಕಾಮಧೇನು ಗೋ ಶಾಲೆ ಮಾಡ್ತಿದೆ.
ಕಸಾಯಿಖಾನೆಗೆ ಕೊಂಡೊಯ್ಯುವ ಗೋವುಗಳು, ಅನಾರೋಗ್ಯದಿಂದಿರುವ ಹಸುಗಳು, ಪೊಲೀಸರು ರಕ್ಷಿಸಿದ ಗೋವುಗಳು ಸೇರಿದಂತೆ ಸುಮಾರು 70 ದನಗಳು ಈ ಗೋಶಾಲೆಯಲ್ಲಿವೆ. ಸ್ವಂತ ಹಣದಲ್ಲಿ ಗೋಶಾಲೆ ನಿರ್ಮಿಸಿ ಗೋವುಗಳನ್ನು ರಕ್ಷಿಸುತ್ತಿರುವ ಚಿಕ್ಕಮಗಳೂರಿನ ಭಗವಾನ್ ಅವರ ಈ ಕಾರ್ಯಕ್ಕೆ ದಾನಿಗಳು ಸಹ ನೆರವಾಗುತ್ತಿದ್ದಾರೆ.