ಚಿಕ್ಕಮಗಳೂರು: ಭೀಕರ ಮಳೆಗೆ ಕಾಫಿನಾಡು ನಲುಗಿ ಹೋಗಿದೆ. ಮುಸ್ಸಂಜೆ ಆಗ್ತಿದ್ದಂತೆ ಜಿಲ್ಲೆಯ ಹಲವೆಡೆ ರಣ ಭೀಕರ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ನೋಡ ನೋಡುತ್ತಿದ್ದಂತೆ ನದಿಂತಾದ ರಸ್ತೆಗಳನ್ನು ಕಂಡು ಜನರಿಗೆ ಭೀತಿ ಉಂಟಾಗಿತ್ತು. ಎರಡೇ ಎರಡು ಗಂಟೆ ಸುರಿದ ರಣ ಮಳೆಗೆ ಮಲೆನಾಡು ಅಲ್ಲೋಲ - ಕಲ್ಲೋಲ ಸೃಷ್ಟಿಯಾಗಿತ್ತು. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿ ಹೋಗಿದೆ. ಮನೆಗಳು ಜಲಾವೃತಗೊಂಡಿವೆ. ಸುಮಾರು ಏಳು ಇಂಚಿನಷ್ಟು ಮಳೆ ಮಲೆನಾಡಿಗರನ್ನ ಹೈರಾಣಾಗಿಸಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಸುರಿದ ಮಳೆಗೆ ನೀರು ರಸ್ತೆಯಲ್ಲಿ ಎರಡ್ಮೂರು ಅಡಿ ಎತ್ತರದಲ್ಲಿ ನದಿಯಂತೆ ಹರಿದಿದೆ. ಗುಡ್ಡಗಾಡು ಪ್ರದೇಶದಲ್ಲಿ ಧಾರಾಕಾರವಾಗಿ ಸುರಿದ ಮಳೆ ನೀರು ಮಣ್ಣಿನ ಜೊತೆ ನುಗ್ಗಿ ಜಯಪುರ ಪಟ್ಟಣದ ಅಕ್ಷರಶಃ ಜಲಾವೃತಗೊಂಡಿದೆ.