ಚಿಕ್ಕಮಗಳೂರು:ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರ ಸೇರಿದಂತೆ ವಿವಿಧೆಡೆ ಕಾಫಿ ಬೆಳೆ ನೆಲಕ್ಕೆ ಬಿದ್ದು ನಾಶವಾಗುತ್ತಿದೆ. ಕೊಯ್ಲು ಸಮಯದಲ್ಲಿ ಮಳೆ ಬೀಳುತ್ತಿರುವುದು ಬೆಳೆನಾಶಕ್ಕೆ ಕಾರಣವಾಗಿದೆ.
ಹಗಲು ರಾತ್ರಿ ಎಡಬಿಡದೆ ಮಳೆ ಬೀಳುತ್ತಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಒಂದೆಡೆ ಮೈ ಕೊರೆಯುವ ಚಳಿ ಮತ್ತೊಂದೆಡೆ ದಟ್ಟ ಮಂಜು ಬೀಳುತ್ತಿದೆ. ವಾಹನ ಸವಾರರು ಭಯದಿಂದ ವಾಹನ ಚಾಲನೆ ಮಾಡಬೇಕಾಗಿದೆ.
ಕಾಫಿ ಕೊಯ್ಲು ಆರಂಭ:ಮೂಡಿಗೆರೆ ತಾಲೂಕಿನಾದ್ಯಂತ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದೆ. ರೊಬಸ್ಟಾ ಕಾಫಿಯೂ ಹಣ್ಣಾಗಿದ್ದು, ರೈತರು ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಣ್ಣು ಗಿಡದಿಂದ ನೆಲಕ್ಕುದುರುತ್ತಿದೆ. ಮಳೆಗೆ ನೆಲಕ್ಕೆ ಬಿದ್ದ ಕಾಫಿ ಹಣ್ಣನ್ನು ಬೆಳೆಗಾರರು ಆರಿಸುವಂತಾಗಿದೆ. ಹವಾಮಾನ ವೈಪರೀತ್ಯದಿಂದ ಕೃಷಿಕರು ನಷ್ಟ ಅನುಭವಿಸುವಂತಾಗಿದೆ. ಭತ್ತದ ಕಟಾವು ಡಿಸೆಂಬರ್, ಜನವರಿಯಲ್ಲಿ ಮುಗಿಯಬೇಕಿತ್ತು. ಮಳೆಯಿಂದ ಕೊಯ್ಲು ವಿಳಂಬವಾಗಿ ರೈತರು ನಷ್ಟ ಅನುಭವಿಸಬೇಕಾಗಿದೆ.