ಚಿಕ್ಕಮಗಳೂರು :ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುಲಿರುವ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಪಾಲ್ಗೊಳ್ಳಲು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಧರ್ಮಸ್ಥಳಕ್ಕೆ ದೂರದ ಊರುಗಳಿಂದ ಪಾದ ಯಾತ್ರೆಯಲ್ಲಿ ತೆರಳುವ ಸಾವಿರಾರು ಭಕ್ತರಿಗೆ ಊಟ, ಉಪಹಾರದ ಜೊತೆಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಯುವಕರ ತಂಡವೊಂದು, ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾರ್ಥಕ ಸೇವೆ ಸಲ್ಲಿಸುತ್ತಿದೆ.
ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ. ಅದೇ ರೀತಿ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದೇ ತೆರಳುತ್ತಿದ್ದಾರೆ. ಅಂತಹ ಭಕ್ತರಿಗಾಗಿ ಉಚಿತ ಊಟ, ಉಪಹಾರದ ವ್ಯವಸ್ಥೆಯನ್ನು ಈ ತಂಡ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ತಂಡದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ನಗರಸಭೆ ಆಯುಕ್ತರು ಸೇರಿದಂತೆ ಇತರರು ನೆರವು ನೀಡಿದ್ದಾರೆ.
ದಾನಿಗಳು ನೀಡುವ ದೇಣಿಗೆಯಿಂದ ಭಕ್ತರಿಗೆ ಊಟ, ಉಪಚಾರ ಮಾಡಲಾಗುತ್ತಿದೆ. ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು ದಣಿವು ನಿವಾರಿಸಿ ಕೊಳ್ಳಲು, ವಿಶ್ರಮಿಸಲು ಸೂಕ್ತ ಸ್ಥಳವಿಲ್ಲದೇ ಪರದಾಡುವುದನ್ನು ಮನಗಂಡ ಈ ತಂಡ ಅವರ ನೆರವಿಗೆ ನಿಂತಿದೆ. ಬೆಳಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಇಲ್ಲಿ ಸ್ವಲ್ಪ ಸಮಯ ತಂಗಿದ್ದು, ಆತಿಥ್ಯ ಸ್ವೀಕರಿಸಿ ಮುಂದುವರಿಯುತ್ತಾರೆ. ಮೂಡಿಗೆರೆ ಕೊಟ್ಟಿಗೆಹಾರದಲ್ಲಿ ಕೆಲ ಯುವಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.