ಚಿಕ್ಕಮಗಳೂರು:ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಮೂಲದ ಯೋಧ ಗಣೇಶ್ ಮೃತದೇಹ ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಪತ್ತೆಯಾಗಿದೆ. ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಎಂಬಲ್ಲಿನ ಸೈನಿಕ ಗಣೇಶ್ ಗುವಾಹಟಿಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು.
ಗಣೇಶ್ ಏಪ್ರಿಲ್ 24ರಂದು ಊರಿಗೆ ಬಂದಿದ್ದು, ಜೂನ್ 09ರಂದು ಕರ್ತವ್ಯದ ಸಲುವಾಗಿ ಮನೆಯಿಂದ ವಾಪಸ್ ತೆರಳಿದ್ದರು. ಗುವಾಹಟಿಗೆ ತೆರಳುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಕೆ.ಎನ್. ಮಾಹಿತಿ ನೀಡಿ, ಗಣೇಶ್ ಮಸಿಗದೆಯಿಂದ ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದು ಸೇನೆಯವರು ತಿಳಿಸಿದ್ದಾರೆ. ಪಾರ್ಥಿವ ಶರೀರವನ್ನು ಇನ್ನೂ ಎರಡು ದಿನದಲ್ಲಿ ಕಳಿಸಬಹುದು. ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್, ಮಸೀಗದ್ದೆ ನಾಗಯ್ಯ ಹಾಗೂ ಗಂಗಮ್ಮ ದಂಪತಿಯ ಪುತ್ರರಾಗಿದ್ದರು. ಮದುವೆಯಾಗಿದ್ದ ಅವರಿಗೆ ಒಂದು ಪುಟ್ಟ ಮಗುವಿದೆ. ಮಾಹಿತಿ ತಿಳಿದು ಸ್ಥಳೀಯರು ಹಾಗೂ ಸುತ್ತ ಮುತ್ತಲಿನ ಊರಿನವರು ಅಪಾರ ಸಂಖ್ಯೆಯಲ್ಲಿ ಮೃತರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲು ಆಗಮಿಸುತ್ತಿದ್ದಾರೆ. ಮುಂದಿನ ಕಾರ್ಯಗಳಿಗೆ ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಸುಬ್ರಮಣ್ಯ ಬಳಿ ಚಲಿಸುತ್ತಿದ್ದ ಬಸ್, ಟೆಂಪೋ ಮೇಲೆ ಬಿದ್ದ ಮರಗಳು..