ಚಿಕ್ಕಮಗಳೂರು:ಸನಾತನ ಹಿಂದೂ ಪರಿಷತ್ ಹಾಗೂ ಹರಿಹರಪುರ ಶ್ರೀಮಠದ ನೇತೃತ್ವದಲ್ಲಿ ಸಮಾನ ಸಂಸ್ಕಾರ ಸಮಾವೇಶ (ಸಂಸ್ಕಾರ ಹಬ್ಬ) ಸಾವಿರಾರು ಜನರು ಹಾಗೂ ಭಕ್ತರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆದಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ನಡೆದ ಈ ಸಂಸ್ಕಾರ ಹಬ್ಬ ಕೊಪ್ಪ ತಾಲೂಕಿನ 23 ಸಾವಿರಕ್ಕೂ ಹೆಚ್ಚು ಹಿಂದೂಗಳ ಮನೆಗಳಿಗೆ ತೆರಳಿ ಐದು ಉತ್ತಮ ಸಮಾನ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿ, ಮೌಲ್ಯಯುತವಾದ ಸಮಾಜ ನಿರ್ಮಾಣ ಮಾಡುವ ಜೊತೆಗೆ ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಭಗವದ್ಗೀತೆಯ ಕಂಠಪಾಠ ಮಾಡಿಸಿ, ಜಾತಿ - ಭೇದ ಮರೆತು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸನಾತನ ಹಿಂದೂ ಧರ್ಮದ ಜೊತೆಗೆ ಸಂಸ್ಕಾರ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಹರಿಹರಪುರ ಮಠ ವತಿಯಿಂದ ಸಂಸ್ಕಾರ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಇಂತಹ ಸಂಸ್ಕಾರ ಹಬ್ಬದ ಸಮಾವೇಶ ಮಾಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಂತಹ ಸಂಸ್ಕಾರ ನಮ್ಮ ಸಮಾಜದಲ್ಲಿ ಮನೆ - ಮನೆಗೆ ತಲುಪುವ ಅಗತ್ಯವಿದ್ದು, ದೇಶ ಹಾಗೂ ನಮ್ಮ ಸಂಸ್ಕೃತಿ ಸಾರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹರಿಹರಪುರ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಯಾರ ಭಾವನೆಗೂ ಧಕ್ಕೆ ಬಾರದಂತೆ ಎಲ್ಲರನ್ನೂ ಒಂದು ಚೌಕಟ್ಟಿನಲ್ಲಿ ತರುವ ನಿಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. 23 ಸಮುದಾಯ ಗುರುತಿಸಿ, ಪರಿಶಿಷ್ಠ, ಜಾತಿ, ಪಂಗಡದಿಂದ ಪುರೋಹಿತ ವರ್ಗದವರನ್ನು ಸೇರಿಸಿಕೊಂಡು ಸನಾತನ ಹಿಂದೂ ಧರ್ಮದಲ್ಲೇ ಇಂತಹ ಸಮಾವೇಶ ಇದೇ ಮೊದಲ ಬಾರಿಗೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಶಾಸಕ ಸಿಟಿ ರವಿ... ವಿಡಿಯೋ