ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಡೂರು ತಾಲೂಕಿನ ಹಲವು ಭಾಗಗಳಾದ ಕಡೂರು ನಗರ, ಬೀರೂರು, ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ಕಳ್ಳರು ಪದೇ ಪದೇ ದೇವಸ್ಥಾನಗಳಿಗೆ ನುಗ್ಗಿ ದೇವರ ವಿಗ್ರಹ ಹಾಗೂ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಕುರಿತು ತನಿಖೆ ಆರಂಭಿಸಿದ ಕಡೂರು ತಾಲೂಕಿನ ಪೊಲೀಸರು ಕೊನೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದೇವಾಲಯಗಳಿಗೆ ಕನ್ನ ಹಾಕ್ತಿದ್ದ ಆರೋಪಿಗಳು ಪೊಲೀಸ್ ಬಲೆಗೆ ರಾಜು ಹಾಗೂ ತಮ್ಮಯ್ಯ ಬಂಧಿತ ಆರೋಪಿಗಳು. ಬಂಧನದ ವೇಳೆ ಇವರು ಅಂತರ್ ಜಿಲ್ಲಾ ಕಳ್ಳರು ಎಂಬ ಸತ್ಯ ಹೊರ ಬಿದ್ದಿದ್ದು, ಶಿವಮೊಗ್ಗ ಹಾಗೂ ಹೊಸದುರ್ಗ ತಾಲೂಕಿನಲ್ಲಿಯೂ ಕೆಲ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.
ಕಡೂರಿನ ಹೇಮಗಿರಿ ಮಲ್ಲಿಕಾರ್ಜನ ದೇವಸ್ಥಾನ. ಅಂಜನೇಯ ಸ್ವಾಮಿ ದೇವಸ್ಥಾನ. ಚೌಡೇಶ್ವರಿ ದೇವಸ್ಥಾನ. ಪ್ಲೇಗಿನಮ್ಮ ದೇವಸ್ಥಾನ. ಕಾವಲು ಚೌಡೇಶ್ವರಿ ದೇವಸ್ಥಾನ, ಬೊಮ್ಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹತ್ತಾರೂ ದೇವಸ್ಥಾನಗಳಿಗೆ ರಾತ್ರಿ ವೇಳೆ ಇವರಿಬ್ಬರೂ ನುಗ್ಗಿ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.
ಈ ಆರೋಪಿಗಳು ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಇಟ್ಟಿದ್ದು, ದೇವರಿಗೆ ಹಾಕುವ ಮುಖವಾಡಗಳು, ಕಣ್ಣುಗಳು, ಛತ್ರಿಗಳು, ಕರಡಿಗೆ, ಪೂಜಾ ಸಾಮಾಗ್ರಿಗಳು ಸೇರಿದಂತೆ ಸುಮಾರು 5.350 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 16 ಗ್ರಾಂ ಚಿನ್ನದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇನ್ನಿತರ ವಸ್ತುಗಳು, ಒಂದು ಬೈಕ್ ಸಹ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.