ಚಿಕ್ಕಮಗಳೂರು:ಕೊರೊನಾ ವೈರಸ್ ಬಂದ ಮೇಲೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕವೇ ಶಿಕ್ಷಣ ನೀಡುತ್ತಿದೆ ಶಿಕ್ಷಣ ಇಲಾಖೆ. ಆದರೆ, ಈ ಆನ್ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ಪೋಷಕರು ಮಕ್ಕಳಿಗಾಗಿ ಒಂದಿಲ್ಲೊಂದು ಉಪಾಯ ಹುಡುಕುತ್ತಲೇ ಇದ್ದಾರೆ.
ಬಡ ಮಕ್ಕಳಿಗೆ ಮುಳ್ಳಾದ ಅನ್ಲೈನ್ ಶಿಕ್ಷಣ.. ಬಗೆಹರಿಯದ ನೆಟ್ವರ್ಕ್ ಬವಣೆ ಆನ್ಲೈನ್ ಶಿಕ್ಷಣ ಪರ್ಯಾಯ ವ್ಯವಸ್ಥೆಯಾಗಿದ್ದರೂ ಕೂಡ ಅನೇಕ ವಿದ್ಯಾರ್ಥಿಗಳ ಪಾಲಿಗೆ ಇದು ಎಟುಕದಾಗಿದೆ. ಮನೆಯಲ್ಲಿ ಇದುವರೆಗೂ ಟಿವಿಯನ್ನೇ ಕಾಣದ ಕುಗ್ರಾಮದ ಮಕ್ಕಳು ಮೊಬೈಲ್ ಹೊಂದುವುದು ದೂರದ ಮಾತೇ ಸರಿ. ಅಂತೂ ಇಂತು ಒಂದು ಮೊಬೈಲ್ ವ್ಯವಸ್ಥೆ ಮಾಡಿಕೊಂಡರೂ ಅತ್ತ ನೆಟ್ವರ್ಕ್ ಪರದಾಟ. ನೆಟ್ವರ್ಕ್ಗಾಗಿ ಕಾಡು ಗುಡ್ಡ ಅಲೆದಾಡುವ ಮಲೆನಾಡಿನ ಭಾಗಗಳ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು.
ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಸ್ಮಾರ್ಟ್ ಪೋನ್ ಹಾಗೂ ಟಿವಿಗಳನ್ನು ತೆಗೆದುಕೊಳ್ಳಲು ಶಕ್ತಿಯಿಲ್ಲ. ಒಂದು ವೇಳೆ ತೆಗೆದುಕೊಂಡರೂ ವಿದ್ಯುತ್ ಸಮಸ್ಯೆ, ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕಟ್ಟಿಟ್ಟಬುತ್ತಿ. ಇದರಿಂದ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಪಾಠಗಳು ಡೌನ್ಲೌಡ್ ಆಗೋದಿಲ್ಲ. ಟಿವಿಯಲ್ಲಿ ಪಾಠ ಬರುವ ವೇಳೆ ವಿದ್ಯುತ್ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ಮನೆಯಲ್ಲಿನ ಪೋಷಕರು ಅನಕ್ಷರಸ್ಥರಾಗಿದ್ದರಂತೂ ಈ ರೂಪದ ಕಲಿಕೆಗಳೆಲ್ಲ ಇನ್ನೂ ಕಷ್ಟಕರ.
ಇನ್ನೊಂದೆಡೆ ನಿತ್ಯ ದೀರ್ಘ ಕಾಲದ ವರೆಗೆ ಮೊಬೈಲ್ ನೋಡುವುದರಿಂದ ಮಕ್ಕಳಿಗೆ ತಲೆ ನೋವು, ಕಣ್ಣು ನೋವು, ಆರೋಗ್ಯದಲ್ಲಿ ಏರು ಪೇರು ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದಷ್ಟು ಬೇಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಶಾಲಾ ಕಾಲೇಜುಗಳು ತೆರೆಯುವಂತಾಗಬೇಕು ಇಲ್ಲವೇ ಸೂಕ್ತ ಕ್ರಮಗಳನನ್ನುಸರಿಸಿ ಶಾಲಾ ಶಿಕ್ಷಣ ಪ್ರಾರಂಭಿಸಬೇಕು.