ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆ ಇರುವುದು ಮತ್ತೆ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ಪರದಾಟ ನಡೆಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗದೀಶ್ (38) ಉಸಿರಾಟದ ಸಮಸ್ಯೆಯಿಂದ ನರಳಿ ಸಾವಿಗೀಡಾಗಿದ್ದಾರೆ. ಇವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಪತ್ನಿ-ಮಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ. ಈ ವೇಳೆ ಕೋವಿಡ್ ರಿಪೋರ್ಟ್ ಇಲ್ಲದೇ ಚಿಕಿತ್ಸೆ ನೀಡಲು ನಿರಾಕರಿಸಿರುವ ಆರೋಪ ಕೇಳಿ ಬಂದಿದೆ.
ಸತತ ಎರಡು ದಿನಗಳ ಕಾಲ ಬೆಂಗಳೂರಿನ ಆಸ್ಪತ್ರೆಗಳನ್ನು ಸುತ್ತಿದ್ರೂ ಚಿಕಿತ್ಸೆ ಸಿಗದೇ, ಕೊನೆಗೆ ಪತ್ನಿ ಮಗಳ ಕಣ್ಣೆದುರೇ ಜಗದೀಶ್ ಸಾವನ್ನಪ್ಪಿದ್ದಾರೆ. 'ನನ್ನ ಪತಿ ತುಂಬಾ ಚೆನ್ನಾಗಿದ್ರು. ಆಸ್ಪತ್ರೆಗಳಲ್ಲಿ ಬೇಡಿಕೊಂಡರೂ ಆಕ್ಸಿಜನ್ ಸಿಗಲೇ ಇಲ್ಲ. ಕೋವಿಡ್ ನೆಪದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ' ಎಂದು ಅನಿತಾ ಕಣ್ಣೀರಿಟ್ಟರು.
ಜಗದೀಶ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸಾಲ ತೀರಿಸಬೇಕು, ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕೆಂಬ ಕನಸು ಕಂಡಿದ್ದರಂತೆ. ಹೀಗಾಗಿ ಊರು ಬಿಟ್ಟು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಆಕ್ಸಿಜನ್ ಸಿಗದೆ ಜಗದೀಶ್ ಸಾವನ್ನಪ್ಪಿದ್ದು, ಹೀಗಿದ್ದರೂ ಗ್ರಾಮದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಿದೆ.
ಇದನ್ನೂ ಓದಿ:ಇನ್ಮೇಲೆ ಮೆಡಿಕಲ್ ಆ್ಯಕ್ಸಿಜನ್ ಕೊರತೆ ಆಗೋದಿಲ್ಲ.. ಇದನ್ನ ನಿಯಂತ್ರಿಸಲು ವಾರ್ ರೂಂ