ಚಿಕ್ಕಮಗಳೂರು:ಯುವತಿಗೆ ಚೂರಿ ಇರಿದಿದ್ದ ಆರೋಪಿ ಎರಡು ದಿನಗಳ ಬಳಿಕ ನೇರವಾಗಿ ನ್ಯಾಯಾಲಯದ ಮುಂದೆ ಬಂದು ಶರಣಾಗಿದ್ದಾನೆ.
ಚೂರಿ ಇರಿತಕ್ಕೊಳಗಾಗಿದ್ದ ಯುವತಿ ಜಿಲ್ಲೆಯ ಬಾಳೆಹೊನ್ನೂರು-ಕಳಸ ಮಧ್ಯೆ ಬರುವ ಮಾಲಗೋಡು ಗ್ರಾಮದ ಬಳಿ ಗಡಿಗೇಶ್ವರದ ಮಿಥುನ್ ಎಂಬ ಯುವಕ ಬಾಳೆಹೊನ್ನೂರು ಬಳಿಯ ಬಾಸಾಪುರದ ಯುವತಿಗೆ ಎರಡು ದಿನಗಳ ಹಿಂದೆ 8 ರಿಂದ 10 ಬಾರಿ ಚೂರಿಯಿಂದ ಇರಿದು ಪರಾರಿಯಾಗಿದ್ದ.
ಗಂಭೀರವಾಗಿ ಗಾಯಗೊಂಡ ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುವುದನ್ನು ನೋಡಿದ್ದ ಸ್ಥಳೀಯರು, ಆಕೆಯನ್ನು ಕಳಸ ಆಸ್ಪತ್ರೆಗೆ ದಾಖಲಿಸಿದ್ದರು. ಯುವತಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಆಕೆಯನ್ನು ಹಾಸನಕ್ಕೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಯುವತಿ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಿಥುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಆರೋಪಿ ಮಿಥುನ್ ತಾನಾಗಿಯೇ ಇಂದು ನೇರವಾಗಿ ಎನ್ ಆರ್ ಪುರ ತಾಲೂಕಿನ ನ್ಯಾಯಾಧೀಶರ ಮುಂದೆ ಬಂದು ಶರಣಾಗಿದ್ದಾನೆ. ನ್ಯಾಯಾಧೀಶರು ಮಿಥುನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಾಳೆಹೊನ್ನೂರು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.