ಕರ್ನಾಟಕ

karnataka

ETV Bharat / state

ರಸ್ತೆ ಇಲ್ಲ, ಜೋಳಿಗೆಯಲ್ಲಿ ವೃದ್ಧೆಯನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು- ವಿಡಿಯೋ

ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಅನಾರೋಗ್ಯಪೀಡಿತ ವೃದ್ಧೆಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದೊಯ್ದ ಘಟನೆ ಚಿಕ್ಕಮಗಳೂರಲ್ಲಿ ನಡೆಯಿತು.

By

Published : Jul 13, 2023, 7:17 AM IST

ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಾಟ
ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಾಟ

ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು :ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿವೆ. ಹೀಗಿದ್ದರೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರು, ಸರಿಯಾದ ರಸ್ತೆ ಸೇರಿದಂತೆ ಇನ್ನೂ ಅನೇಕ ಅಗತ್ಯ ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಹೊಸದೊಂದು ನಿದರ್ಶನ ಸಿಕ್ಕಿದೆ.

ಚಿಕ್ಕಮಗಳೂರಿನ ಅರಣ್ಯ, ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸರಿಯಾದ ರಸ್ತೆಗಳಿಲ್ಲ. ಔಷಧೋಪಚಾರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬೀದಿ ದೀಪಗಳಿಲ್ಲದೆ ಜನರು ಶೋಚನೀಯ ಜೀವನ ನಡೆಸುತ್ತಿದ್ದಾರೆ. ವಾಹನಗಳು ಓಡಾಡುವ ರಸ್ತೆಗಳಿಲ್ಲದ ಕಾರಣ ವಯೋವೃದ್ಧೆಯೊಬ್ಬರನ್ನು ಜನರು ಜೋಳಿಗೆಯಲ್ಲೇ ಹೊತ್ತು ಆಸ್ಪತ್ರೆಗೆ ಸೇರಿಸಿದ ಘಟನೆ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ಬುಧವಾರ ನಡೆಯಿತು.

70 ವರ್ಷ ವಯಸ್ಸಿನ ಶೇಷಮ್ಮರನ್ನು ಕುಟುಂಬಸ್ಥರು ಜೋಳಿಗೆಯಲ್ಲಿ ಕಟ್ಟಿ ಮೈಲಿಗಟ್ಟಲೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಡಂಚಿನ ಈ ಕುಗ್ರಾಮದಲ್ಲಿ ಹತ್ತಾರು ಮನೆಗಳಿವೆ. ಆದರೆ ಓಡಾಡಲು ಸೂಕ್ತ ರಸ್ತೆಯನ್ನು ಸರ್ಕಾರಗಳು ಇದುವರೆಗೂ ಕಲ್ಪಿಸಿಲ್ಲ. ಈ ಭಾಗದ ಜನರು, ನಾವು ಅರಣ್ಯ ಇಲಾಖೆಯ ಕಿರುಕುಳದಿಂದಲೂ ಬೇಸತ್ತು ಹೋಗಿದ್ದೇವೆ ಎನ್ನುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ರಸ್ತೆಗಳನ್ನು ಮಾಡಿಕೊಳ್ಳಲು ಬಿಡುತ್ತಿಲ್ಲವಂತೆ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಸ್ಥಳೀಯರ ಬೇಸರ. ಗ್ರಾಮಕ್ಕೆ ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರಸ್ತೆ ನಿರ್ಮಿಸಲು ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ.

ಗ್ರಾಮಕ್ಕೆ ಬೇಕಾಗಿರುವುದು ಕೇವಲ ಒಂದು ಕಿಲೋಮೀಟರ್ ರಸ್ತೆಯಷ್ಟೇ. ಆದರೆ ಇದುವರೆಗೂ ರಸ್ತೆಭಾಗ್ಯ ಕೂಡಿ ಬಂದಿಲ್ಲ. ಹೀಗಾಗಿ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿಯೇ ಬದುಕು ಸವೆಸುವಂತಾಗಿದೆ. ಕ್ಷೇತ್ರದ ನೂತನ ಶಾಸಕರು ಈ ಬಗ್ಗೆ ಗಮನಹರಿಸಬೇಕು. ಸೂಕ್ತ ರಸ್ತೆ ನಿರ್ಮಿಸಿಕೊಟ್ಟು ಈಚಲವಳ್ಳಿ ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟ ನಿವಾರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗ್ರಾಮಸ್ಥ ರಮೇಶ್​ ಮಾಧ್ಯಮದ ಜೊತೆ ಮಾತನಾಡಿ, "ಈಚಲವಳ್ಳಿ ಗ್ರಾಮದಿಂದ ಸಂಸೆಗೆ ಹೋಗಬೇಕಾದರೆ ಸುಮಾರು 6ರಿಂದ 7 ಕಿ.ಮೀ ಕ್ರಮಿಸಬೇಕು. ಕಲ್ಕೋಡುವಿನಿನಿಂದ ಈಚಲವಳ್ಳಿ ಗ್ರಾಮಕ್ಕೆ ಅರ್ಧ ಕಿ.ಮೀ ದೂರವಿದ್ದು ಅಷ್ಟಕ್ಕಾದರೂ ರಸ್ತೆ ಮಾಡಬೇಕು. ಗ್ರಾಮದಲ್ಲಿ ಯಾರೊಬ್ಬರಿಗಾದರೂ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಜೋಳಿಗೆಯಲ್ಲಿಯೇ ಹೊತ್ತೊಯ್ಯಬೇಕಾದ ಪರಿಸ್ಥಿತಿ ಇದೆ. ಬೇರಾವುದೇ ಸೌಕರ್ಯಗಳು ಇಲ್ಲಿಲ್ಲ. ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಹಾಗಾಗಿ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು" ಎಂದು ಮನವಿ ಮಾಡಿದರು.

ಇದನ್ನೂ ಓದಿ:ಶಿವಮೊಗ್ಗ: ಜಡಿಮಳೆಗೆ ಕೆಸರುಗದ್ದೆಯಾದ ರಸ್ತೆ; ಭತ್ತ ನಾಟಿ ಮಾಡಿ ಅವ್ಯವಸ್ಥೆಗೆ ಆಕ್ರೋಶ

ABOUT THE AUTHOR

...view details