ಚಿಕ್ಕಮಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ಕಡೂರಿನ ಯೋಧ ಶೇಷಪ್ಪ ಅವರ ಅಂತಿಮ ವಿಧಿವಿಧಾನ ಹುಟ್ಟೂರಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿದೆ. ಕಳೆದ 20 ವರ್ಷಗಳಿಂದ ಸೇನೆಯಲ್ಲಿದ್ದ ಅವರು, ಬಿಎಸ್ಎಫ್ ಮೆಕ್ಯಾನಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆದರೆ ಕಳೆದ 4 ದಿನದ ಹಿಂದೆ ಸೇನಾ ವಾಹನ ರಿಪೇರಿ ಮಾಡುತ್ತಿದ್ದ ವೇಳೆ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು.
ನಿನ್ನೆ ಯೋಧ ಶೇಷಪ್ಪ ಅವರ ಪಾರ್ಥಿವ ಶರೀರ ಆಗಮಿಸಿತ್ತು. ಅವರ ನಿವಾಸದ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಊರಿನವರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದ ಶೇಷಪ್ಪ ಅವರ ಪಾರ್ಥಿವ ಶರೀರ ನೋಡಲು ಜನಸಾಗರವೇ ತುಂಬಿತ್ತು. ಯೋಧನ ಕಳೆದುಕೊಂಡ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪನ ಚಿತೆಗೆ 11 ವರ್ಷದ ಬಾಲಕ ಕಣ್ಣೀರಿಡುತ್ತಲೇ ಕೊಳ್ಳಿ ಇಡುವ ದೃಶ್ಯ ನೆರೆದವರ ಹೃದಯ ಹಿಂಡುವಂತಿತ್ತು.