ಕರ್ನಾಟಕ

karnataka

ETV Bharat / state

ಬೀಟೆ ಮರ ಕಡಿದು ಸಾಗಿಸಿದ ಆರೋಪ: ಚಿಕ್ಕಮಗಳೂರು ಅರಣ್ಯಾಧಿಕಾರಿ ಅಮಾನತು

ಅಕ್ರಮವಾಗಿ ಬೀಟೆ ಮರ ಕಡಿದು ಸಾಮಿಲ್​ಗೆ ಸಾಗಿಸಿದ ಆರೋಪ. ಚಿಕ್ಕಮಗಳೂರು ಉಪವಲಯ ಅರಣ್ಯ ಅಧಿಕಾರಿ ದರ್ಶನ್ ಅಮಾನತು.

forest officer suspended
ಅಮಾನತುಗೊಂಡ ಅರಣ್ಯಾಧಿಕಾರಿ ದರ್ಶನ್

By

Published : Feb 3, 2023, 10:38 AM IST

Updated : Feb 3, 2023, 11:29 AM IST

ಚಿಕ್ಕಮಗಳೂರು:ತಾಲೂಕಿನ ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಯೊಬ್ಬರು ಅಕ್ರಮವಾಗಿ ಬೀಟೆ ಮರ ಕಡಿದು ಸಾಮಿಲ್​ಗೆ ಸಾಗಿಸಿರುವ ಆರೋಪ ಕೇಳಿಬಂದಿದೆ. ಅಕ್ರಮವಾಗಿ ಮರವನ್ನ ಕಡಿದು ಸಾಗಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಉಪವಲಯ ಅರಣ್ಯ ಅಧಿಕಾರಿ ದರ್ಶನ್ ಎಂಬುವರನ್ನು ಡಿಎಫ್​ಓ ಕ್ರಾಂತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.‌

ದೂರು ನೀಡಿದ್ದ ಸ್ಥಳೀಯರು: ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಆನಿಗನಹಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಐದು ಬೀಟೆ ಮರಳನ್ನ ಕಡಿಯಲಾಗಿತ್ತು. ಈ ಬಗ್ಗೆ ಸ್ಥಳೀಯರು ವಲಯ ಅರಣ್ಯಾಧಿಕಾರಿ ಹಾಗೂ ಡಿಎಫ್​ಒಗೆ ದೂರು ನೀಡಿದ್ದರು.

ಬೀಟೆ ಮರ ಕಡಿದು ಸಾಮಿಲ್​ಗೆ ರವಾನೆ:ಇನ್ನು ಮರ ಕಡಿದವರು ಮತ್ತು ಗ್ರಾಮಸ್ಥರು ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿತ್ತು.ಅರಣ್ಯಾಧಿಕಾರಿ ಹೇಳಿದ್ದಕ್ಕೆ ಮರ ಕಡಿದಿರುವುದಾಗಿ ಆಡಿಯೋದಲ್ಲಿ ಮರ ಕಡಿದವರು ಹೇಳಿದ್ದರು.ಸುಮಾರು 20 ರಿಂದ 25 ಮೀಟರ್ ಬೀಟೆ ಮರವನ್ನ ಕಡಿದು ಸ್ವಲ್ಪ ಮರವನ್ನ ಹಾಸನ ಜಿಲ್ಲೆ ಬೇಲೂರಿನ ಸಾಮಿಲ್​ಗೆ ರವಾನಿಸಿದ್ದರು. ಮತ್ತೊಂದಷ್ಟು ಮರವನ್ನ ಮನೆಗೆ ಪೀಠೋಪಕರಣ ಮಾಡಲು ಕಾರ್ಪೆಂಟರ್ ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ.

ನಾಲ್ವರ ವಿರುದ್ಧ ಪ್ರಕರಣ: ವಿಷಯ ತಿಳಿದ ಕೂಡಲೇ ತನಿಖೆಗೆ ಮುಂದಾದ ಅರಣ್ಯ ಅಧಿಕಾರಿಗಳಿಗೆ ಅಧಿಕಾರಿಯ ಅಕ್ರಮವಾಗಿ ಮರ ಕಡಿದು ಸಾಗಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಜೊತೆಗೆ ಅಕ್ರಮವಾಗಿ ಮರ ಕಡಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರ್ಶನ್ ಫಾರೆಸ್ಟರ್ ಹೇಳಿದ್ದಕ್ಕೆ ಮರ ಕಡಿದು ಸಾಗಿಸಿದೆವು ಎಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ಹರೀಶ್, ಪ್ರದೀಪ್, ಮಂಜು ಹಾಗೂ ಬೇಲೂರಿನ ಮರದ ಸಾಮಿಲ್​ ಮಾಲೀಕ ಸಿರಾಜ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಮರ ಕಡಿಸಿದ್ದರಿಂದ ಅರಣ್ಯಾಧಿಕಾರಿ ದರ್ಶನ್ ಮೇಲೆ ಇಲಾಖೆಗೆ ಕ್ರಮ ಕೈಗೊಂಡು ಅಮಾನತು ಮಾಡಲಾಗಿದೆ.

ವಲಯ ಅರಣ್ಯಾಧಿಕಾರಿ ಅಮಾನತು: ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿಲ್ಪಾ.ಎಸ್ ಎಲ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಅಮಾನತಿಗೆ ಕಾರಣ?: ಕೆಲ ತಿಂಗಳ ಹಿಂದಷ್ಟೆ ಅಧಿಕಾರವಹಿಸಿಕೊಂಡಿದ್ದ ಶಿಲ್ಪಾ ತಮ್ಮ ಕಚೇರಿಯ ಸಿಬ್ಬಂದಿಯನ್ನು ನಿಯಂತ್ರಿಸುವಲ್ಲಿ ಮತ್ತು ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲವಾಗಿದ್ದು, ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವೈಫಲ್ಯ ಹೊಂದಿದ್ದರು ಎನ್ನಲಾಗಿದೆ. ಅಲ್ಲದೇ, ಕಾಡಾನೆ ಸಮಸ್ಯೆಗೆ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಪ್ರಾಣಿ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದರ ಜೊತೆಗೆ ಅಧಿಕಾರಿ, ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಹಾಸನ: ಕರ್ತವ್ಯ ಲೋಪದ ಹಿನ್ನೆಲೆ ವಲಯ ಅರಣ್ಯಾಧಿಕಾರಿ ಅಮಾನತು

Last Updated : Feb 3, 2023, 11:29 AM IST

ABOUT THE AUTHOR

...view details