ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಸಾಹಸಿಗಳ ಹಾಟ್‌ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಮಲೆನಾಡಿನ ಸೊಬಗು ಸವಿಯುವುದೇ ಒಂದು ಅದ್ಭುತ ಅನುಭವ.
ಚಳಿಯ ಮಧ್ಯೆಯೂ ಹಸಿರು ಹೊದ್ದು ಬೆಚ್ಚಗೆ ಮಲಗಿರುವ ಮುಗಿಲೆತ್ತರದ ಬೆಟ್ಟಗುಡ್ಡಗಳನ್ನು ನೋಡಿದರೆ ಪ್ರಕೃತಿ ಮಾತೆಯ ತವರು ಚಿಕ್ಕಮಗಳೂರು ಕಾಣಿಸುತ್ತದೆ. ಎತ್ತ ನೋಡಿದರೂ ಹಸಿರಸಿರಿ, ಜೊತೆಗೆ ತಣ್ಣನೆಯ ಗಾಳಿ. ಕ್ಷಣಕ್ಕೊಂದು ರೀತಿ ಬದಲಾಗುವ 'ದೇವರ ಮನೆ' ಬೆಟ್ಟದ ಪರಿಸರ ನೋಡಿದರೆ ಮನಸೋಲದವರುಂಟೇ?. ಮೋಡಗಳ ಕಣ್ಣಾಮುಚ್ಚಾಲೆ ಆಟ, ಜೋರಾಗಿ ಬೀಸುತ್ತಿರುವ ತಂಗಾಳಿ, ಕಣ್ಣಿಗೆ ಹಬ್ಬದೂಟ ಉಣಬಡಿಸುವ ದೂರದಲ್ಲಿ ಕಾಣುವ ಸಣ್ಣ ಸಣ್ಣ ಜಲಪಾತಗಳು.. ದೇವರೇ ಸೃಷ್ಟಿಸಿರುವ ಈ ಸುಂದರ ಲೋಕ 'ದೇವರಮನೆ'.