ಚಿಕ್ಕಮಗಳೂರು :ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಸೋಂಕಿತ ಪ್ರದೇಶಗಳನ್ನು ಸರ್ಕಾರದ ನಿರ್ದೇಶನದಂತೆ ನಿಯಂತ್ರಿತ ವಲಯಗಳನ್ನಾಗಿ ಘೋಷಿಸಲಾಗಿದೆ. ಈ ಪ್ರದೇಶಕ್ಕೆ ಘಟನಾ ಕಮಾಂಡರ್‌ಗಳನ್ನು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನೇಮಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ತರೀಕೆರೆ ನಗರದ ತ್ಯಾಗರಾಜ ನಗರದಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುವ ಪ್ರದೇಶ ನಿಯಂತ್ರಿತ ವಲಯವನ್ನಾಗಿ ಘೋಷಿಸಲಾಗಿದೆ. ಈ ಸ್ಥಳಕ್ಕೆ ಘಟನಾ ಕಮಾಂಡರ್ ಆಗಿ ತರೀಕೆರೆ ತಾಲೂಕು ತಹಶೀಲ್ದಾರ್ ಸಿ ಜಿ ಗೀತಾ ಅವರನ್ನು ನೇಮಿಸಲಾಗಿದೆ. ಈ ವಲಯದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿ ಪ್ರದೇಶಗಳನ್ನು ಇವರು ನಿರ್ವಹಿಸಲಿದ್ದಾರೆ. ಕೆ.ದಾಸರಹಳ್ಳಿಯ ಅಂಗನವಾಡಿ ಕೇಂದ್ರದಿಂದ ಘಟನಾ ನಿಯಂತ್ರಣ ಕೇಂದ್ರದ ಮೇಲ್ವಿಚಾರಣೆ ಮಾಡಲು ತಿಳಿಸಿದೆ.
ಘಟನಾ ಕಮಾಂಡರ್‌ರವರು ಘಟನಾ ನಿಯಂತ್ರಣ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಘಟನಾ ಕೇಂದ್ರದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಆಹಾರ, ದಿನಸಿ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳು ತಮ್ಮ ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿ ಸಾಕಷ್ಟು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದ್ದಾರೆ.
ದಿನಸಿ ಅಂಗಡಿಗಳು, ಬ್ಯಾಂಕ್‌ಗಳು, ಎಟಿಎಂ ಕೇಂದ್ರಗಳು, ಸೂಪರ್ ಮಾರ್ಕೇಟ್ ಮುಂತಾದ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾಡಳಿತದ ವತಿಯಿಂದ ತೆರೆದಿರುವ ಮತ್ತು ತೆರೆಯಲು ಉದ್ದೇಶಿಸಿರುವ ಕ್ವಾರಂಟೈನ್ ಕ್ಯಾಂಪ್‌ಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು, ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳನ್ನು ಖಚಿತಪಡಿಸಿಕೊಳ್ಳವುದು, ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ತೆರೆದು ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.