ಚಿಕ್ಕಮಗಳೂರು : ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಜೆಡಿಎಸ್ ಬೆಂಬಲದೊಂದಿಗೆ ಸ್ವಪಕ್ಷೀಯ ಬಿಜೆಪಿ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ. ಇದರಿಂದಾಗಿ ಬಿಜೆಪಿಗೆ ಭಾರಿ ಮುಖಭಂಗ ಉಂಟಾಗಿದೆ. ಅಧ್ಯಕ್ಷ ಸ್ಥಾನ ಸಂಬಂಧ ಚಿಕ್ಕಮಗಳೂರು ನಗರಸಭೆಯಲ್ಲಿ ಕಳೆದ ಎರಡು ತಿಂಗಳಿನಿಂದ ಹೈಡ್ರಾಮ ನಡೆಯುತ್ತಲೇ ಇತ್ತು. ಈ ಹಿನ್ನೆಲೆ ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿತ್ತು. ಶುಕ್ರವಾರ ನಡೆದ ಅವಿಶ್ವಾಸ ಮಂಡನೆಯನ್ನು ಬಿಜೆಪಿಗೆ ಸೋಲಾಗಿದೆ.
ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿಗೆ ಸೋಲು :ನಗರಸಭೆ ಹಾಲಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಾಮಾನ್ಯ ಸಭೆಯಲ್ಲಿ ವಿವಿಧ ಪಕ್ಷದ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಅಧ್ಯಕ್ಷರು ಯಾವುದೇ ಚರ್ಚೆಗೆ ಅವಕಾಶ ನೀಡದೆ, ಅವಿಶ್ವಾಸ ನಿರ್ಣಯ ಪರ ಇರುವವರು ಕೈ ಎತ್ತುವಂತೆ ಸೂಚನೆ ನೀಡಿದರು. ಆಗ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಮತ್ತು ಆಯುಕ್ತರು ಅವಕಾಶ ನೀಡದೆ ನೇರ ಮತದಾನ ಪ್ರಕ್ರಿಯೆಗೆ ಸೂಚನೆ ನೀಡಿದರು.
ಈ ಹಂತದಲ್ಲಿ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದಾಗ ಸಭೆಯಲ್ಲಿ ತೀವ್ರ ಗೊಂದಲದ ವಾತಾವರಣ ಉಂಟಾಯಿತು. ಯಾರೂ ಕೈ ಎತ್ತದ ಹಿನ್ನೆಲೆ, ಅವಿಶ್ವಾಸ ವಿಫಲ ಎಂದು ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಬಳಿಕ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿ ನಗರಸಭೆ ಅಧ್ಯಕ್ಷರ ಕೊಠಡಿ ಬಳಿ ಧರಣಿ ನಡೆಸಿದರು.