ಚಿಕ್ಕಮಗಳೂರು: ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಸಮೀಪದ ಗುಡ್ನಳ್ಳಿಯ ವಿಶೇಷಚೇತನ ಓಟಗಾರ್ತಿ ರಕ್ಷಿತಾ ರಾಜು ಎಂಬವರು 1,500 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಹಾಗು ದೇಶಕ್ಕೆ ಕೀರ್ತಿ ತಂದಿದ್ದಾರೆ.
1,500 ಮೀ. ಓಟವನ್ನು 5:21:45 ಸೆಕೆಂಡಿನಲ್ಲಿ ಕ್ರಮಿಸುವ ಮೂಲಕ ಇವರು ಈ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಪ್ಯಾರಿಸ್ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಕ್ಷಿತಾ 5ನೇ ಸ್ಥಾನ ಪಡೆದಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.
ಕೋಚ್ ರಾಹುಲ್ ಬಾಲಕೃಷ್ಣ ಅವರೂ ಕೂಡ 1,500 ಮೀ. ಪುರುಷರ ವಿಭಾಗದ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ಶಾರ್ಜಾ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್‌ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ರಕ್ಷಿತಾ, ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಜಯಿಸಿದ್ದರು.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 400, 800 ಹಾಗೂ 1,500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದು, ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 400 ಹಾಗೂ 1500 ಮೀ ಓಟದಲ್ಲಿ ಚಿನ್ನ ಗೆದ್ದಿದ್ದರು. ರಕ್ಷಿತಾ ಅವರ ತಂದೆ ರಾಜು ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದವರು. ವಿವಾಹವಾದ ನಂತರ ಗುಡ್ನಳ್ಳಿಯಲ್ಲಿ ಕುಟುಂಬಸಮೇತ ನೆಲೆಸಿದ್ದಾರೆ.