ಕರ್ನಾಟಕ

karnataka

ETV Bharat / state

ದೇವಸ್ಥಾನಕ್ಕೆಂದು ಮೀಸಲಿಟ್ಟಿದ್ದ ಹಣ ಜ್ಞಾನ ದೇಗುಲಕ್ಕೆ...ಸರ್ಕಾರಿ ಶಾಲೆಗೆ 'ಪುನರ್ಜನ್ಮ'! - siribadige villagers improve govt school by founding

ರಾಜ್ಯದ ಪ್ರತಿ ಹಳ್ಳಿಯ ಜನ ಸರ್ಕಾರದ ದಾರಿ ಕಾಯದೆ ತಮ್ಮೂರ ಶಾಲೆಗಳನ್ನ ಉಳಿಸಿಕೊಳ್ಳಲು ಮುಂದಾದರೆ ಯಾವ ಸರ್ಕಾರಿ ಶಾಲೆಗಳು ಬಾಗಿಲು ಹಾಕಲ್ಲ. ಶಿಕ್ಷಕರು ಕೇಳಿದ ಕೂಡಲೇ 35 ಸಾವಿರ ರೂ. ಹಣ ಕೊಟ್ಟು, ದೇವಸ್ಥಾನಕ್ಕೆ ಎಂದು ಮೀಸಲಿಟ್ಟ ಹಣವನ್ನೂ ಕೊಟ್ಟ ಈ ಹಳ್ಳಿ ಜನರ ಹೃದಯ ಶ್ರೀಮಂತಿಕೆ ಮೆಚ್ಚುವಂಥದ್ದಾಗಿದೆ..

chikkamagalur
ಗ್ರಾಮಸ್ಥರಿಂದ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಹೊಸ ರೂಪ

By

Published : Apr 5, 2021, 7:49 PM IST

Updated : Apr 5, 2021, 8:21 PM IST

ಚಿಕ್ಕಮಗಳೂರು :ನಮ್ಮೂರ ದೇವಸ್ಥಾನ ಬೇರೆ ಅಲ್ಲ, ನಮ್ಮ ಮಕ್ಕಳು ಓದೋ ಶಾಲೆ ಬೇರೆ ಅಲ್ಲ ಅಂತ ಈ ಹಳ್ಳಿಯ ಜನ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ. ಸರ್ಕಾರದಿಂದ ಅಂತೂ ಹಣ ಬರ್ತಿಲ್ಲ. ಶಾಲೆ ಇಂದೋ-ನಾಳೆಯೋ ಅಂತಿದೆ. ಹೀಗೆ ಬಿಟ್ಟರೆ ಆಗಲ್ಲ ಅಂತ ಹಳ್ಳಿಯ ಜನ ಊರ ದೇವರಿಗೆ ಇಟ್ಟಿದ್ದ ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ.

ಗ್ರಾಮಸ್ಥರೇ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಹೊಸ ರೂಪ..

ಚಿಕ್ಕಮಗಳೂರು ತಾಲೂಕಿನ ಗಡಿ ಸಿರಿ ಬಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರದಿಂದ ವರ್ಷಕ್ಕೆ 6 ಸಾವಿರ ರೂ. ಹಣ ಬರುತ್ತಿತ್ತು. ಅದು ಎರಡು ಕಂತಿನಲ್ಲಿ. ಕೊರೊನಾ ವರ್ಷದಲ್ಲಿ ಅದೂ ಬಂದಿಲ್ಲ. ಹೀಗೆ ಬಿಟ್ಟರೆ ಶಾಲೆ ಬಿದ್ದೇ ಹೋಗುತ್ತೆ ಎಂದು ಹಳ್ಳಿಗರು ತಮ್ಮೂರ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.

ಕೆಳ ಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ. ಎಲ್ಲರೂ ಸೇರಿ 100 ರಿಂದ 1,000 ರೂಪಾಯಿವರೆಗೂ..ಹೀಗೆ ಅವರವರ ಕೈಲಾದಷ್ಟು ಹಣ ಹಾಕಿ 35 ಸಾವಿರ ರೂ. ಹಣವನ್ನು ಶಾಲಾ ಶಿಕ್ಷಕರಿಗೆ ಕೊಟ್ಟಿದ್ದಾರೆ.

ಆ ಹಣಕ್ಕೆ ಶಿಕ್ಷಕರು ಮತ್ತಷ್ಟು ಸೇರಿಸಿ ಮೇಲ್ಛಾವಣಿ ದುರಸ್ತಿ ಮಾಡಿದ್ದಾರೆ. ಮಕ್ಕಳು ಕೂರಲು ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. 1 ರಿಂದ 7ನೇ ತರಗತಿವರೆಗಿನ 48 ಮಕ್ಕಳು ಓದುವ 8 ರೂಮ್‌ಗಳಿಗೂ ಸುಣ್ಣ-ಬಣ್ಣ ಹೊಡೆಸಿ ಶೃಂಗರಿಸಿದ್ದಾರೆ.

ಊರಲ್ಲಿ ಕೇವಲ ಚಂದಾ ಎತ್ತಿ ಮಾತ್ರ ಶಾಲೆಗೆ ಹೊಸ ರೂಪ ನೀಡಿಲ್ಲ. ಊರಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವಿತ್ತು. ಆ ಜಾಗವನ್ನು 11 ಸಾವಿರಕ್ಕೆ ಹರಾಜು ಕೂಗಿದ್ದರು. ಆ ಹಣವನ್ನು ಕೆಳಸಿರಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದ ದೇವಸ್ಥಾನಕ್ಕೆಂದು 5,500 ರೂಪಾಯಿಯನ್ನು ಪಾಲು ಮಾಡಿಕೊಂಡಿದ್ದರು.

ಯಾವಾಗ ಶಿಕ್ಷಕರು ಈ ರೀತಿ ಮಾಡೋಣ ಎಂದರೋ ಆಗ ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನೂ ನಮ್ಮ ಮಕ್ಕಳು ಓದೋ ಶಾಲೆ ಕೂಡ ನಮಗೆ ದೇವಸ್ಥಾನ ಎಂದು ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ. ಊರಿನ ಮುಖಂಡರ ಜತೆ ಶಿಕ್ಷಕರು ಹೋದ ಕೂಡಲೇ ಯಾವ ಮನೆಯವರು ಸಹ ಬರೀಗೈಲಿ ಕಳಿಸಿಲ್ಲ. ತಮ್ಮ ಶಕ್ತ್ಯಾನುಸಾರ ಸಹಾಯ ಮಾಡಿದ್ದಾರೆ.

ಎರಡೇ ಗಂಟೆಗೆ 35 ಸಾವಿರ ಹಣ ಹೊಂದಿಸಿ ಕೊಟ್ಟಿದ್ದಾರೆ. ಇದರಿಂದ ಇಂದು ಶಾಲೆ ನಳನಳಿಸ್ತಿದೆ. ಊರಿನ ಜನರ ಸಹಕಾರಕ್ಕೆ ಶಿಕ್ಷಕ ವೃಂದ ಕೂಡ ಅಭಿನಂದನೆ ಸಲ್ಲಿಸಿದೆ.

ಓದಿ:ಮನೆ ಮನೆಯಲ್ಲೂ ಬ್ಲ್ಯಾಕ್ ಬೋರ್ಡ್.. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ನಡೆ ಆರಂಭಿಸಿದ ಚಿಕ್ಕಮಗಳೂರು ಶಿಕ್ಷಕರು

ರಾಜ್ಯದ ಪ್ರತಿ ಹಳ್ಳಿಯ ಜನ ಸರ್ಕಾರದ ದಾರಿ ಕಾಯದೆ ತಮ್ಮೂರ ಶಾಲೆಗಳನ್ನ ಉಳಿಸಿಕೊಳ್ಳಲು ಮುಂದಾದರೆ ಯಾವ ಸರ್ಕಾರಿ ಶಾಲೆಗಳು ಬಾಗಿಲು ಹಾಕಲ್ಲ. ಶಿಕ್ಷಕರು ಕೇಳಿದ ಕೂಡಲೇ 35 ಸಾವಿರ ರೂ. ಹಣ ಕೊಟ್ಟು, ದೇವಸ್ಥಾನಕ್ಕೆ ಎಂದು ಮೀಸಲಿಟ್ಟ ಹಣವನ್ನೂ ಕೊಟ್ಟ ಈ ಹಳ್ಳಿ ಜನರ ಹೃದಯ ಶ್ರೀಮಂತಿಕೆಗೆ ಮೆಚ್ಚುವಂತದ್ದಾಗಿದೆ.

Last Updated : Apr 5, 2021, 8:21 PM IST

ABOUT THE AUTHOR

...view details