ಚಿಕ್ಕಮಗಳೂರು:ಲಾಕ್ಡೌನ್ ಸಡಿಲಿಕೆ ನಂತರ, ಅಂತರ್ ಜಿಲ್ಲೆ ಹಾಗೂ ಅಂತಾರಾಜ್ಯಗಳಿಂದ ಬಂದಿರುವ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಕಾದು ಕುಳಿತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪ್ರಮುಖವಾಗಿ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಹೋಗಲು ತಮ್ಮ ಹೆಸರನ್ನು ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಯಲ್ಲಿ ನೊಂದಣಿ ಮಾಡಿಸುತ್ತಿದ್ದಾರೆ. ನಿನ್ನೆ 27 ಜನರನ್ನು ಬಿಹಾರಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ರೈಲ್ವೆ ಮೂಲಕ ಕಳುಹಿಸಿದ್ದು, ಇಂದು 34 ಜನರು ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಹೋಗಲು ಸೇವಾಸಿಂಧು ಮೂಲಕ, ನೋಂದಣಿ ಮಾಡಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕಾಫಿ ತೋಟದಲ್ಲಿ ದುಡಿಯುತ್ತಿದ್ದ ಅಂತಾರಾಜ್ಯದ ಕಾರ್ಮಿಕರು, ತಮ್ಮ ಲಗೇಜ್ ಸಮೇತ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ತೆಗೆದುಕೊಂಡು ಬಂದಿದ್ದು, ತಮ್ಮ ತಮ್ಮ ಊರಿಗೆ ಹೋಗಲು ಕಾತರತೆಯಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಿಂದ ಅಂತರ್ ಜಿಲ್ಲೆಗಳಿಗೆ 2,070 ಜನರು ಹೋಗಿದ್ದು, 1,110 ಜನರು ಚಿಕ್ಕಮಗಳೂರು ಜಿಲ್ಲೆಗೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕರನ್ನು ಅವರ ತಾಯ್ನಾಡಿಗೆ ಕಳುಹಿಸಲು ಜಿಲ್ಲೆಯಿಂದ 100 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸುರಕ್ಷಿತವಾಗಿ ಜನರನ್ನು ತಮ್ಮ ತಮ್ಮ ಊರಿಗೆ ಸೇರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಅಂತರ್ ರಾಜ್ಯಕ್ಕೆ ಹೋಗುವಂತಹ ಜನರನ್ನು ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಈ ರೀತಿಯಾಗಿ ಹಂಚಿಕೆ ಮಾಡಿ, ಅಲ್ಲಿಂದ ರೈಲ್ವೆ ಮೂಲಕ ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಕೊಂಡಿರುವ ಜನರನ್ನು ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.