ಚಿಕ್ಕಮಗಳೂರು:ದೇಶದಲ್ಲಿ ಕೊರೊನಾ 2ನೇ ಅಲೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಭಯಭೀತರಾಗಿರುವ ಜಿಲ್ಲೆಯ ಜನರು, ಪ್ರವಾಸಿಗರ ಪ್ರವೇಶವನ್ನು ತಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊರೊನಾ 2ನೇ ಅಲೆಗೆ ಸಿಲುಕಿರುವ ಕರ್ನಾಟಕ ಡೇಂಜರ್ ಝೋನ್ ತಲುಪಿದೆ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳು ಅಪಾಯದ ಹಂತ ತಲುಪಿವೆ. ನಮಗೆ ಆ ಸ್ಥಿತಿ ಬರಬಾರದು ಅಂತ ಈಗಾಗಲೇ ಅಲರ್ಟ್ ಆಗಿರುವ ಜಿಲ್ಲೆಯ ಜನರು, ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಳೆಗಾಲ ಆರಂಭವಾಗುತ್ತಿದೆ. ಇಲ್ಲೂ ಕೂಡ ಇತರೆ ಜಿಲ್ಲೆಗಳಂತಹ ಸ್ಥಿತಿ ನಿರ್ಮಾಣವಾದ್ರೆ ನಿಯಂತ್ರಣ ಅಸಾಧ್ಯವಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ 15 ದಿನದ ಮಟ್ಟಿಗಾದರೂ ಪ್ರವಾಸಿಗರನ್ನ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಎಂತದ್ದೇ ಸ್ಥಿತಿ ಬಂದರೂ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.