ಚಿಕ್ಕಮಗಳೂರು : ನಗರಸಭೆಯ ಎಲೆಕ್ಷನ್ ನಡೆಸುವುದಕ್ಕೆ ಕೋರ್ಟ್ ಸೂಚನೆ ನೀಡಿದರೂ, ಸದಸ್ಯರ ನಡುವಿನ ಪೈಪೋಟಿಯಿಂದಾಗಿ ಕೋರ್ಟ್ ಕದ ತಟ್ಟುವವರ ಸಂಖ್ಯೆ ಇನ್ನೂ ನಿಂತಿಲ್ಲ. ಈ ಮಧ್ಯೆ ಮೂಲಭೂತ ಸೌಲಭ್ಯಗಳಿಲ್ಲದೆ, ನಗರಸಭೆಯಲ್ಲಿ ಕೆಲಸ ಕಾರ್ಯಗಳಾಗದೆ ಜನ ಹೈರಾಣಾಗಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಚಿಕ್ಕಮಗಳೂರು ನಗರಸಭೆ ಸದಸ್ಯರು ಇದ್ದ-ಬದ್ದ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಮುಂದಿನ ಚುನಾವಣೆಗೆ ವೇದಿಕೆ ಭದ್ರ ಮಾಡಿಕೊಳ್ಳಬೇಕಿತ್ತು.
ಆದರೆ ನಗರಸಭೆಯ ವಾರ್ಡ್ ಚುನಾವಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದ್ದರೂ, ಕೆಲ ಮಾಜಿ ಸದಸ್ಯರು ಮತ್ತೆ ನ್ಯಾಯಾಲಯದ ಕದ ತಟ್ಟಿದ್ದು, ಚುನಾವಣೆ ಮತ್ತೆ ಮುಂದೆ ಹೋಗುವ ಸಾಧ್ಯತೆಗಳಿವೆ. ಈಗಾಗಲೇ ಮೀಸಲಾತಿ ಪ್ರಕಟವಾಗಿ 33 ವಾರ್ಡ್ಗಳಲ್ಲಿ 16 ಮಹಿಳಾ ಹಾಗೂ 17 ಪುರುಷ ಸ್ಥಾನಕ್ಕೆ ಕೆಟಗರಿ ಕೂಡ ಪ್ರಕಟವಾಗಿವೆ. ಆದರೆ ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವ ಸದಸ್ಯರ ವಿರುದ್ಧ ಇತರ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಕೆಟಗರಿ ಬಂದು ಹೊಸಬರಿಗೆ ಅವಕಾಶ ಸಿಗಲಿ, ನಾನು ನನ್ನ ಕುಟುಂಬಸ್ಥರೇ ಸದಸ್ಯ ಆಗಿರಬೇಕು ಎಂಬ ಧೋರಣೆ ಸರಿಯಲ್ಲ ಎಂದೂ ಹೇಳುತ್ತಿದ್ದಾರೆ.