ಕರ್ನಾಟಕ

karnataka

ETV Bharat / state

ಅವನತಿಯ ಅಂಚಿಗೆ ತಲುಪಿದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ!

ಮನಮುಟ್ಟುವ ಸೇವೆಯಿಂದ ಪ್ರಾಯಾಣಿಕರ ಮನಸ್ಸಿನಲ್ಲಿ ಸ್ಥಾನ ಪಡೆದ ಸಾರಿಗೆ ಸಂಸ್ಥೆಯೊಂದು ಇದೀಗ ಇತಿಹಾಸದ ಪುಟಕ್ಕೆ ಸೇರುತ್ತಿದೆ. ಕಾರಣ ಏನಿರಬುದು?

ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆ

By

Published : May 3, 2019, 9:45 AM IST

ಚಿಕ್ಕಮಗಳೂರು: ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾದಂತಹ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆಯ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಜಪಾನ್​ ದೇಶದಿಂದಲೂ ಬೆನ್ನು ತಟ್ಟಿಸಿಕೊಂಡ ಸಹಕಾರ ಸಾರಿಗೆ ಸಂಸ್ಥೆ ಇದೀಗ ನಷ್ಟದ ಸುಳಿಗೆ ಸಿಲುಕಿ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ ಅನ್ನೋದೇ ಬಹಳ ನೋವಿನ ಸಂಗತಿ.

ಕುಗ್ರಾಮಗಳ ಮನೆ-ಮನಸ್ಸುಗಳನ್ನು ಬೆಸೆದ ಸಂಸ್ಥೆ:

ಈ ಸಹಕಾರ ಸಾರಿಗೆ ಸಂಸ್ಥೆ ಮಲೆನಾಡಿನ ಕುಗ್ರಾಮಗಳ ಮನೆ ಹಾಗೂ ಮನಸ್ಸುಗಳನ್ನು ಬೆಸೆದಿದೆ. ಈ ಮೂಲಕ ಸಂಸ್ಥೆಯು ಮಲೆನಾಡಿನ ಜನರಿಂದ ವ್ಯಾಪಕ ಪ್ರಶಂಸೆ ಸಹ ಗಳಿಸಿದೆ. ಇದರ ಕೇಂದ್ರ ಕಚೇರಿಯೂ ನಗರದಲ್ಲಿದ್ದು, ಈ ಸಂಸ್ಥೆಯನ್ನು ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಒಂದು ಸಾಧನೆಯಾಗಿದೆ. ಈ ಸಹಕಾರಿ ಸಂಸ್ಥೆಯ ಬಗ್ಗೆ ಹೇಳಲು ಮತ್ತು ವರ್ಣಿಸಲು ಪದಗಳೇ ಇಲ್ಲ ಎನ್ನುತ್ತಾರೆ ಇಲ್ಲಿನ ಕಾರ್ಮಿಕ ಮುಖಂಡರು.

ಡಾಕ್ಟರೇಟ್ ಪ್ರದಾನ:

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಈ ಸಂಸ್ಥೆಯ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಸಹ ಪಡೆದಿದ್ದಾರೆ. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ಪಿಹೆಚ್​ಡಿ ನೀಡಿ ಗೌರವಿಸಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ಸಂಸ್ಥೆ ತನ್ನ ಕೊನೆಯ ಕ್ಷಣಗಳನ್ನು ಎಣಿಸಲು ಪ್ರಾರಂಭ ಮಾಡಿದ್ದು ಬಹಳ ನೋವಿನ ಸಂಗತಿ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿರುವ ಈ ಸಹಕಾರ ಸಾರಿಗೆ ಸಂಸ್ಥೆಯ ಬಸ್​ಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮಗಳನ್ನು ಕಂಡಿದ್ದು, ಕಳೆದ 30 ವರ್ಷಗಳಿಂದ ಕೋಟ್ಯಂತರ ಪ್ರಯಾಣಿಕರನ್ನು ಕರೆದೊಯ್ದು ಅವರ ಮನೆ ಸೇರಿಸಿದೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ಕಾರ್ಮಿಕರೇ ಸೇರಿಕೊಂಡು 6 ಬಸ್​​ಗಳಿಂದ 76 ಬಸ್​ ಮಾಡಿ ಬೃಹತ್ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ. ರಾಜ್ಯಕ್ಕೆ ಕೆಎಸ್​ಆರ್​ಟಿಸಿ ಸಂಸ್ಥೆಯಾದರೆ, ಮಲೆನಾಡಿಗೆ ಈ ಸಹಕಾರ ಸಾರಿಗೆ ಸಂಸ್ಥೆ.

ಅವನತಿಯ ಅಂಚಿಗೆ ತಲುಪಿದ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆ

ಸಂಸ್ಥೆಯ ಏಳಿಗೆಗೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಹೋರಾಟಗಾರರ ಶ್ರಮವಿದ್ದು, ನೂರಾರು ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಪ್ರತಿನಿತ್ಯ ಶೇ. 50ರಷ್ಟು ರಿಯಾಯಿತಿ ಕೊಟ್ಟು ದಟ್ಟ ಕಾಡು, ಕಲ್ಲು-ಮಣ್ಣಿನ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದೆ. ಇಂತಹ ಇತಿಹಾಸ ಹೊಂದಿರುವ ಈ ಸಂಸ್ಥೆ ನಮ್ಮನ್ನು ಆಳುವ ಸರ್ಕಾರದ ನೀತಿ - ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ, ಟ್ಯಾಕ್ಸ್ ಇತರೆ ಕಾರಣಗಳಿಂದ ಕಾರ್ಮಿಕರಿಗೆ ತಿಂಗಳ ಸಂಬಳ ನೀಡೋಕು ಆಗದೇ ಬಾಗಿಲು ಹಾಕುವ ಹೊಸ್ತಿಲಲ್ಲಿ ಬಂದು ನಿಂತಿದೆ.

ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ:

1990ರಲ್ಲಿ ಶಂಕರ್ ಟ್ರಾನ್ಸ್​ಪೋರ್ಟ್ ಮುಚ್ಚಿದ ಬಳಿಕ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್​ ಮಲೆನಾಡ ಮನೆ-ಮನಗಳ ಮಧ್ಯೆ ಹಳ್ಳಿ-ಹಳ್ಳಿಗಳ ನಡುವೆ, ತಾಲೂಕುಗಳ ನಡುವೆ, ಜನರ ಮಧ್ಯೆ ತನ್ನದೇ ಆದಂತಹ ಬಾಂಧವ್ಯ ಬೆಸೆದಿದೆ. ಇಷ್ಟೆಲ್ಲ ಕೆಲಸ ಮಾಡಿದ ಸಂಸ್ಥೆ ಅವನತಿಯ ಅಂಚಿಗೆ ಬಂದು ತಲುಪಿರುವುದು ನಿಜಕ್ಕೂ ದುರಂತ. ತಿಂಗಳಿಗೆ ಡೀಸೆಲ್​ನಿಂದ ಲಕ್ಷಾಂತರ ರೂ. ನಷ್ಟವಾಗುತ್ತಿದೆ.

ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್​ ಕಟ್ಟಬೇಕಿದೆ. ಜೊತೆಗೆ ರಿಯಾಯಿತಿ ಪಾಸ್​ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್​ ಕಡಿತ ಹಾಗೂ ಪಾಸ್​ಗಳ ಉಳಿಕೆ ಹಣವನ್ನು ನೀಡುವಂತೆ ಸಂಸ್ಥೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡುತ್ತಿದೆ. ಸರ್ಕಾರ ಪದೇ ಪದೆ ಡೀಸೆಲ್ ದರ ಹೆಚ್ಚು ಮಾಡಿದಾಗಲೂ ಸಂಸ್ಥೆಯವರು ಟಿಕೆಟ್​ ದರ ಮಾತ್ರ ಏರಿಕೆ ಮಾಡಿಲ್ಲ. ಸರ್ಕಾರ ಈ ಸಂಸ್ಥೆಗೆ ಸ್ಪಂದಿಸದಿದ್ದರೆ ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಸಂಸ್ಥೆ ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರೋದು ಗ್ಯಾರಂಟಿ.

ಒಟ್ಟಾರೆಯಾಗಿ ಒಂದು ಕಾಲದಲ್ಲಿ ದೊರೆಯಂತೆ ಮೆರೆದ ಸಹಕಾರ ಸಂಸ್ಥೆ ಇದೀಗ ಕಾರ್ಮಿಕರಿಗೆ ಸಂಬಳ ಕೊಡೋಕು ಆಗದೇ ಮುಚ್ಚುವ ಹಂತಕ್ಕೆ ತಲುಪಿದ್ದು ಬಹಳ ನೋವಿನ ಸಂಗತಿ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಸರಿಯಾದ ಉತ್ತರವಿಲ್ಲ. ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದ್ದು, ಸರ್ಕಾರ ಸ್ಪಂದಿಸುವ ಮೂಲಕ ಕೈ ಹಿಡಿಯಬೇಕು ಅನ್ನೋದು ಸ್ಥಳೀಯರ ಮಾತು.

ABOUT THE AUTHOR

...view details