ಚಿಕ್ಕಮಗಳೂರು:ಹೆಮ್ಮಾರಿ ಕೊರೊನಾ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೂರಾರು ಜನರನ್ನು ಬಲಿ ಪಡೆದಿದೆ. ಈ ಪೈಕಿ 90 ಜನರ ಮೃತದೇಹಗಳ ಅಂತ್ಯಸಂಸ್ಕಾರವನ್ನು ಸ್ಥಳೀಯರೇ ನೆರವೇರಿಸಿದ್ದರು. ಆದರೆ, 46 ಮಂದಿಯ ಮೃತದೇಹ ಕೊಂಡೊಯ್ಯಲು ಕುಟುಂಬಸ್ಥರು ಬಾರದ ಕಾರಣ ನಗರಸಭೆ, ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಜತೆಗೆ ಆ 46 ಜನರ ಚಿತಾಭಸ್ಮವನ್ನು ಮಂಗಳವಾರ ಪವಿತ್ರ ಕ್ಷೇತ್ರವಾದ ಖಾಂಡ್ಯದಲ್ಲಿ ಹಿಂದೂ ಸಂಪ್ರದಾಯದಂತೆ ವಿದಿ-ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು.
ಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜನೆ:
ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮೃತರ ಚಿತಾಭಸ್ಮ ತೆಗೆದುಕೊಂಡು ಹೋಗಿ ಅಂತಿಮ ವಿಧಿ ವಿಧಾನ ಮಾಡುವದು ತಲೆತಲಾಂತರದಿಂದ ನಡೆದುಕೊಂಡ ಬಂದ ಸಂಪ್ರದಾಯ. ಆದರೆ ಇಂದು ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಇದರ ಮದ್ಯೆ ಕೊರೊನಾ ಪೀಡಿತರು ಮೃತ ಪಟ್ಟರೆ ಮೃತನ ಸಂಬಂಧಿಗಳೇ ದೇಹವನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ.
ಕೋವಿಡ್ 2ನೇ ಅಲೆಗೆ ಜಿಲ್ಲೆಯಲ್ಲಿ 189 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಸುಮಾರು 46 ಜನರ ಚಿತಾಭಸ್ಮವನ್ನು ಸಂಬಂಧಿಗಳು ತೆಗೆದುಕೊಂಡು ಹೋಗದೆ ಸ್ಮಶಾನದಲ್ಲಿಯೇ ಬಿಟ್ಟಿದ್ದರು. ಹಾಗಾಗಿ ಮಂಗಳವಾರ ಬಿಜೆಪಿಯ ಪಾಂಚಜನ್ಯ ಕಚೇರಿಯಿಂದ ಚಿತಾಭಸ್ಮವನ್ನ ಆ್ಯಂಬುಲೆನ್ಸ್ ಮೂಲಕ ಖಾಂಡ್ಯದ ಮಾರ್ಕೇಂಡೇಶ್ವರ ದೇವಾಲಯದ ಪಕ್ಕದಲ್ಲಿರುವ ಭದ್ರಾ ನದಿಗೆ ಕೊಂಡೊಯ್ದು ಹಿಂದೂ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆಗಮ ಪುರೋಹಿತರೊಂದಿಗೆ ಅಸ್ಥಿಯನ್ನ ಭದ್ರಾ ನದಿಗೆ ವಿಸರ್ಜನೆ ಮಾಡಿದರು.