ಚಿಕ್ಕಮಗಳೂರು: ಕಳೆದ 5 ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ವಾನ ಪ್ರೇಮಿಯೊಬ್ಬರು ಲಾಕ್ಡೌನ್ ಸಮಯದಲ್ಲೂ ಸುಮಾರು 600 ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರ ನಿವಾಸಿ ಉಮಾಶಂಕರ್ ಅವರು ಕಬ್ಬಿಣದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶ್ವಾನ ಪ್ರೇಮಿಯಾಗಿರುವ ಇವರು ದಿನನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಸದ್ಯ ಲಾಕ್ಡೌನ್ನಿಂದಾಗಿ ಆಹಾರ ಸಿಗದೆ ಕಂಗಾಲಾಗಿದ್ದ ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.
ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಬಾಂಧವ ಕಾಫಿ ನಾಡಿನ ಜನರಿಂದ ಉಮಣ್ಣ ಅಂತ ಕರೆಸಿಕೊಳ್ಳುವ ಇವರು, ಸ್ವಂತ ಖರ್ಚಿನಲ್ಲಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಒಂದು ವೇಳೆ ಹೊರೆಯಾದ್ರೆ ಅನಿಮಲ್ ಕೇರ್ ಅವರು ಸಹ ಆಹಾರ ಸಾಮಗ್ರಿಗಳನ್ನು ನೀಡುತ್ತಾರೆ. ಲಾಕ್ ಡೌನ್ನಲ್ಲಿ ಬರೋಬ್ಬರಿ 600 ಶ್ವಾನಗಳಿಗೆ ಆಹಾರ ನೀಡಿದ್ದಾರೆ.
ಬೆಳಗ್ಗೆ ಆಹಾರ ಸಿದ್ಧ ಮಾಡಿಕೊಂಡು ಮಧ್ಯಾಹ್ನ 3 ಅಯ್ತು ಅಂದ್ರೆ ಬೈಕ್ ತೆಗೆದುಕೊಂಡು ಸಿಟಿ ರೌಂಡ್ಸ್ ಹಾಕುವ ಇವರು, ನಗರದ ಆಜಾದ್ ಪಾರ್ಕ್, ಟೌನ್ ಕ್ಯಾಂಟೀನ್, ಎಐಟಿ ಸರ್ಕಲ್, ರತ್ನಗಿರಿ ಬೋರೆ, ಡಿಸಿ ಕಚೇರಿ, ಕೋಟೆ ಸರ್ಕಲ್ ಮುಂತಾದ ಕಡೆ ಶ್ವಾನಗಳಿಗೆ ಆಹಾರ ನೀಡುತ್ತಾರೆ. ಸದ್ಯ ಉಮಣ್ಣನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.