ಚಿಕ್ಕಮಗಳೂರು:ರಾಜ್ಯವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆಯೇ, ಇಲ್ಲವೇ ಎಂಬ ಗೊಂದಲದಲ್ಲಿರುವ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಇನ್ನೊಂದು ಆಘಾತ ಎದುರಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವು ಇವರ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಎಂ.ಪಿ.ಕುಮಾರಸ್ವಾಮಿ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತಾದರೂ ಕುಮಾರಸ್ವಾಮಿ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಮಾ.28 ರಂದು ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಕುಮಾರಸ್ವಾಮಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಚಿಕ್ಕಮಗಳೂರು ಎಸ್ಪಿಗೆ ಸೂಚನೆ ನೀಡಿದೆ.
ಪ್ರಕರಣದ ವಿವರ:ಎಂ.ಪಿ.ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಸಾಲ ಪಡೆದಿದ್ದು ಅದರ ಮರು ಪಾವತಿಗಾಗಿ ಕೊಟ್ಟಿರುವ ಎಂಟು ಚೆಕ್‌ಗಳು ಬೌನ್ಸ್ ಆಗಿದ್ದವು. ಹೂವಪ್ಪ ಗೌಡ ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಹೂವಪ್ಪ ಗೌಡರಿಂದ ಪಡೆದ ಸಾಲದಲ್ಲಿ ಒಟ್ಟು ಒಂದು ಕೋಟಿ 38 ಲಕ್ಷದ 65 ಸಾವಿರ ಸಾಲ ಬಾಕಿ ಇತ್ತು. ಇದಕ್ಕೆ ಪ್ರತಿಯಾಗಿ ಸಾಲದ ಕಂತುಗಳೆಂಬಂತೆ ಕುಮಾರಸ್ವಾಮಿ ಎಂಟು ಚೆಕ್‌ಗಳನ್ನು ನೀಡಿದ್ದರು.
ಅವೆಲ್ಲವೂ ಬೌನ್ಸ್ ಆಗಿದ್ದವು. ಎಂಟು ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಜೆ.ಪ್ರೀತ್ ಅವರು ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. ಆಗ ಎಂ.ಪಿ.ಕುಮಾರಸ್ವಾಮಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು. ಕೋರ್ಟ್ 10 ದಿನಗಳ ಕಾಲಾವಕಾಶವನ್ನೂ ನೀಡಿತ್ತು. ಆದರೆ ಶಾಸಕರ ಪರವಾಗಿ ಮೇಲ್ಮನವಿ ಸಲ್ಲಿಕೆ ಆಗಲಿಲ್ಲ. ಹೀಗಾಗಿ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಎಸ್ಪಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಅಲೆಕ್ಸ್ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ವಾರೆಂಟ್:ಅಪ್ರಾಪ್ತ ಆಟಗಾರ್ತಿಯರ ಜತೆ ಅನುಚಿತ ವರ್ತನೆ ಆರೋಪದಲ್ಲಿ ಭಾರತ ಮಹಿಳಾ ಫುಟ್ಬಾಲ್ ತಂಡದ ಮಾಜಿ ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಇತ್ತೀಚೆಗೆ ಜಾಮೀನುರಹಿತ ವಾರೆಂಟ್ ಜಾರಿಯಾಗಿತ್ತು. ಯುರೋಪ್‌ನಲ್ಲಿ ಫುಟ್ಬಾಲ್ ತಂಡದ ಬಾಲಕಿಯರ ಟ್ರಿಪ್‌ನಲ್ಲಿ ಅನುಚಿತ ವರ್ತನೆ ಆರೋಪ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಿ ತನಿಖೆಗೆ ಒಳಗಾಗುವಂತೆ ಎಐಎಫ್‌ಎಫ್ ಸೂಚಿಸಿತ್ತು.
ಅಲೆಕ್ಸ್ ಆಂಬ್ರೋಸ್ ಅವರು ಭಾರತ ಅಂಡರ್-17 ಮಹಿಳಾ ತಂಡದ ಕೋಚ್ ಆಗಿದ್ದರು. ಅವರ ವಿರುದ್ಧ ದ್ವಾರಕಾ ಸೆಕ್ಟರ್ 23 ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆಂಬ್ರೋಸ್ ತಂಡದ ನಾರ್ವೆ ಪ್ರವಾಸದ ಸಮಯದಲ್ಲಿ ಅಪ್ರಾಪ್ತ ಆಟಗಾರರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ದೆಹಲಿ ನ್ಯಾಯಾಲಯ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.
ಇದನ್ನೂ ಓದಿ:ಅಪ್ರಾಪ್ತ ಆಟಗಾರ್ತಿಯರ ಜೊತೆ ಅನುಚಿತ ವರ್ತನೆ ಆರೋಪ; ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ವಾರೆಂಟ್