ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವಾರು ಅವಘಡಗಳು ಸಂಭವಿಸಿವೆ.
ಪ್ರಯಾಣಿಕರ ಗಮನಕ್ಕೆ... ಆ.11ರ ವರೆಗೆ ಚಾರ್ಮಾಡಿ ಘಾಟ್ ರಸ್ತೆ ಬಂದ್ - ಚಿಕ್ಕಮಗಳೂರಲ್ಲಿ ಭಾರಿ ಮಳೆ
ರಸ್ತೆ ಬಿರುಕು, ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಇಂದಿನಿಂದ ಆ.11ರವರೆಗೆ ಚಾರ್ಮಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆರಕ್ಕೂ ಹೆಚ್ಚು ಭಾಗದಲ್ಲಿ ಭೂಕುಸಿತ, ಗುಡ್ಡ ಕುಸಿತ ಹಾಗೂ ಬೃಹತ್ ಗಾತ್ರದ ಬಂಡೆಗಳು ರಸ್ತೆಗೆ ಅಪ್ಪಳಿಸಿ ಬೀಳುತ್ತಿರುವ ಹಿನ್ನೆಲೆ ಮತ್ತು ರಸ್ತೆ ಬಿರುಕು ಬಿಟ್ಟಿದೆ. ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಲು, ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಇಂದಿನಿಂದ ಸಂಪೂರ್ಣ ನಿಷೇಧ ಮಾಡಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಆ.11 ರವರೆಗೂ ಚಾರ್ಮಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಿಂದ ಚಾರ್ಮಾಡಿ ಘಾಟ್ ಮೂಲಕ ಹೋಗುವಂತಹ ಎಲ್ಲಾ ವಾಹನ ಸವಾರರು ಬದಲಿ ಮಾರ್ಗವಾಗಿ ದಕ್ಷಿಣಕನ್ನಡ ಜಿಲ್ಲೆಗೆ ಮೂಡಿಗೆರೆ - ಶಿರಾಡಿ ಘಾಟ್ - ಗುಂಡ್ಯ ರಸ್ತೆಯ ಮೂಲಕ ಸಂಚಾರ ಮಾಡುವಂತೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶಿಸಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.