ಚಿಕ್ಕಮಗಳೂರು: ಕಾಫಿನಾಡಿನ ಚಾರ್ಮಾಡಿ ಘಾಟ್ ನೋಡಲು ಬಲು ಸುಂದರ. ಜೊತೆಗೆ ಅಪಾಯವೂ ಹೌದು. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೊಂಚ ಎಚ್ಚರ ತಪ್ಪಿದ್ರು ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಹಲವು ಗ್ರಾಮದ ಜನ ಕೂಡ ಸಂಕಷ್ಟಕ್ಕೆ ಸಿಲುಕಿಕೊಳ್ತಾರೆ.
ಆದರೆ, ಗ್ರಾಮಗಳಲ್ಲಿ ಈವರೆಗೆ ಯಾವುದೇ ಭೀಕರ ಅನಾಹುತ ಸಂಭವಿಸಲಿಲ್ಲ. ಅದಕ್ಕೆಲ್ಲ ಕಾರಣ ಅಗೋಚರ ದೈವ ಶಕ್ತಿ ಅನ್ನೋದು ಇಲ್ಲಿನ ಜನರ ನಂಬಿಕೆ. ಈ ಮಾರ್ಗದಲ್ಲಿ ಓಡಾಡುವವರಿಗೆ ಹಾಗೂ ಇಲ್ಲಿನ ಗ್ರಾಮಗಳ ಜನರ ಆಸ್ತಿ - ಪಾಸ್ತಿ ರಕ್ಷಣೆ ಆ ಶಕ್ತಿಯ ಹೊಣೆಯಂತೆ.
ಹೊರಟ್ಟಿ ಗ್ರಾಮದಲ್ಲಿ ನೆಲೆಸಿದ್ದಾಳೆ ಗುಳಿಗಮ್ಮ ದೇವಿ:
ಚಾರ್ಮಾಡಿ ರಸ್ತೆಯ ಅಲೇಖಾನ್ ಹೊರಟ್ಟಿ ಗ್ರಾಮದ ಎಂಟ್ರಿಯಲ್ಲೇ ಈ ಗುಳಿಗಮ್ಮ ದೇವಿಯಿದ್ದಾಳೆ. ಆ ಕಲ್ಲಿನ ಮೂರ್ತಿಯೇ ಗುಳಿಗಮ್ಮ ದೇವಿ. ಅಪಾರ ಶಕ್ತಿ ಹೊಂದಿದ್ದಾಳೆ, ನಮ್ಮನ್ನು ಕಾಯುತ್ತಿದ್ದಾಳೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.
ದೇವಿ ಶಕ್ತಿ - ಪ್ರತಿ ವರ್ಷ ಪೂಜೆ:
ಮಳೆಗಾಲದಲ್ಲಿ ಅತಿಹೆಚ್ಚು ಭೂ ಕುಸಿತ, ಗುಡ್ಡ ಕುಸಿತವಾದರೂ ಇಲ್ಲಿ ಸಂಚರಿಸುವವರಿಗೆ ಅಪಾಯವಾಗಿಲ್ಲ. ಚಾರ್ಮಾಡಿ ಘಾಟೇ ಅಲ್ಲೋಲ-ಕಲ್ಲೋಲವಾದರೂ ಈ ಪ್ರದೇಶ ಅಲುಗಾಡಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ಎಡ - ಬಲ ಭಾಗದ ಎರಡು ಕಡೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕುಸಿದಿದ್ರೂ ದೇವಿ ಸ್ಥಳದಲ್ಲಿ ಮಾತ್ರ ಒಂದಿಂಚೂ ಭೂಮಿ ಹಾನಿಯಾಗಿಲ್ಲ.
ಚಾರ್ಮಾಡಿ ಘಾಟ್ಗೆ ಅಂಟಿಕೊಂಡಂತೆ ಇರುವ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆಯ ಹಲವೆಡೆ ಬೃಹತ್ ಪ್ರಮಾಣದ ಬಂಡೆಗಳು ಬಿದ್ರು ಗ್ರಾಮ ಹಾಗೂ ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಗಂಡಾಂತರದಿಂದ ಕಾಪಾಡೋ ಈ ದೇವಿಗೆ ಜನ ಪ್ರತಿ ವರ್ಷ ಪೂಜೆ ಸಲ್ಲಿಸ್ತಾರೆ.
ಚಾರ್ಮಾಡಿ ಘಾಟ್ನ ಸ್ಥಿತಿ:
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ರಸ್ತೆ ಎಂಥಾ ಮಳೆಗೂ ನಲುಗಿರಲಿಲ್ಲ. ಆದರೆ ಕಳೆದ ಬಾರಿಯ ಮಳೆಗೆ ಚಾರ್ಮಾಡಿ ಘಾಟ್ನ ಸ್ಥಿತಿ ಬದಲಿಸಿಬಿಟ್ಟಿತು. ಈ ಮಧ್ಯೆ ಮಳೆಯಾರ್ಭಟಕ್ಕೆ ಸಿಲುಕಿಕೊಂಡ 10 ಜನರು ಅಕ್ಷರಶಃ ಸಾವನ್ನೇ ಗೆದ್ದಿದ್ರು. ಇಷ್ಟೆಲ್ಲ ಆಗುವಾಗ ನಮ್ಮನ್ನು ಬದುಕಿಸಿದ್ದು ಇದೇ ಗುಳಿಗಮ್ಮ ಅನ್ನೋದು ಜನರ ಬಲವಾದ ನಂಬಿಕೆ.
ಇದನ್ನೂ ಓದಿ:ಗಾಯದ ಮೇಲೆ ಬರೆ ಎಳೆದ ನೈಟ್ ಕರ್ಫ್ಯೂ: ವಾಯವ್ಯ ಸಾರಿಗೆ ಇಲಾಖೆಗೆ ಭಾರಿ ನಷ್ಟ
ಅಲೇಖಾನ್ ಗ್ರಾಮದವರಷ್ಟೇ ಅಲ್ಲ. ಸುತ್ತಲಿನ ಆದಿವಾಸಿಗಳ ಸಂಕಷ್ಟ ಪರಿಹರಿಸ್ತಿರೋದು ಕೂಡ ಈ ಗುಳಿಗಮ್ಮ ದೇವಿ. ಇಲ್ಲಿ ಸಂಚರಿಸೋ ನೂರಾರು ಜನ ಇಲ್ಲಿ ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರವಾಗಿ ತಮ್ಮ ಇಷ್ಟಾರ್ಥ ಸಿದ್ದಿಸಿಕೊಳ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಬೆಟ್ಟ-ಗುಡ್ಡ ಕುಸಿಯೋ ಸಂದರ್ಭದಲ್ಲಿ ತಮ್ಮನ್ನ ಕಾಯ್ತಿದ್ದಾಳೆಂದು ಇಲ್ಲಿನ ಜನ ಗುಳಿಗಮ್ಮ ದೇವಿಗೆ ಭಕ್ತಿಯಿಂದ ಪೂಜಾ-ಕೈಂಕರ್ಯ ನಡೆಸಿಕೊಂಡು ಬರುತ್ತಿದ್ದಾರೆ.