ಚಿಕ್ಕಮಗಳೂರು/ದಾವಣಗೆರೆ: ರಾಜ್ಯದಲ್ಲಿ ನಡೆದ 15 ಕ್ಷೇತ್ರದ ಉಪಚುನಾವಣೆ ಎಂಬ ಅಗ್ನಿ ಪರೀಕ್ಷೆಯಲ್ಲಿ ಬಿಜೆಪಿ 12 ಸ್ಥಾನ ಗೆಲ್ಲುವ ಮೂಲಕ ಸುಭದ್ರ ಸರ್ಕಾರದತ್ತ ದಾಪುಗಾಲಿಟ್ಟಿದ್ದು, ಬಿಜೆಪಿಯ ಗೆಲುವಿನ ಹಿನ್ನೆಲೆ ಚಿಕ್ಕಮಗಳೂರು ಹಾಗೂ ದಾವಣಗೆರೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಜಯಭೇರಿ: ಚಿಕ್ಕಮಗಳೂರು, ದಾವಣಗೆರೆಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ
ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ದೊರೆತಿದ್ದು, ರಾಜ್ಯದೆಲ್ಲೆಡೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಇನ್ನು ಈ ವೇಳೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಯಾವತ್ತೇ ಚುನಾವಣೆ ಆದರೂ ಸಹ ಅತಂತ್ರ ಫಲಿತಾಂಶ ಬರೋದಿಲ್ಲ. ಮುಂದಿನ ಫಲಿತಾಂಶ ಬಿಜೆಪಿಯ ಪರವಾಗಿರುತ್ತದೆ. ರಾಜ್ಯದ ಜನರು ಸ್ಪಷ್ಠ ಫಲಿತಾಂಶ ನೀಡಿದ್ದಾರೆ. ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಅವರದ್ದು ಖೇಲ್ ಖತಂ ನಾಟಕ್ ಬಂದ್ ಆಗಿದೆ. ಅವರು ಮನಸ್ಸಿನಲ್ಲಿಯೇ ಮಂಡಕ್ಕಿ ತಿನ್ನುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಇನ್ನು ದಾವಣಗೆರೆಯಲ್ಲೂ ಸಹ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ,
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೆಲವೇ ಸೀಟುಗಳು ಕಡಿಮೆ ಆಗಿದ್ದವು, ಆದರೆ ಜನತೆಯ ಆದೇಶ ಬಿಜೆಪಿಗೆ ಇತ್ತು. ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ದುರಾಡಳಿತ ನಡೆಸಿದ್ದವು. ಇದನ್ನು ಮನಗಂಡ 17ಶಾಸಕರು ರಾಜೀನಾಮೆ ನೀಡಿ ಬಿಎಸ್ ವೈ ಬೆಂಬಲಕ್ಕೆ ನಿಂತಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಜನ ಸುಭದ್ರ ಸರ್ಕಾರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.