ವಕೀಲನ ಮೇಲೆ ಹಲ್ಲೆ ಪ್ರಕರಣ; ಸಿಐಡಿ ತನಿಖೆ ಆರಂಭ ಚಿಕ್ಕಮಗಳೂರು:ವಕೀಲನ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ಅವರು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
ವಕೀಲರಿಂದ ಮೌನ ಪ್ರತಿಭಟನೆ:ವಕೀಲರು ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಕೈಗೆ ಕೆಂಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ವಕೀಲರು ಕೋರ್ಟ್ ಕಲಾಪದಲ್ಲಿ ಭಾಗವಹಿಸದೆ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿರುವ ಆರು ಮಂದಿ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ:ಪೊಲೀಸರ ಸ್ಥೈರ್ಯ, ಶಕ್ತಿಯನ್ನು ಕುಂದಿಸುವ ಕೆಲಸ ಆಗ್ತಿದೆ: ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಅಣ್ಣಯ್ಯ
ಏನಿದು ಪ್ರಕರಣ?:ಕಳೆದ ಗುರುವಾರಸಂಜೆ 7 ಗಂಟೆಯ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಮ್ ಹೆಲ್ಮೆಟ್ ಹಾಕದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬೈಕ್ನ ಕೀ ತೆಗೆದ ವಿಚಾರಕ್ಕೆ ಗಲಾಟೆ ನಡೆದಿತ್ತು. ಠಾಣೆ ಎದುರೇ ಈ ಘಟನೆ ನಡೆದಿದ್ದರಿಂದ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿತ್ತು. ವಕೀಲ ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪಿಎಸ್‍ಐ, ಎಎಸ್ಐ, ಹೆಡ್ ಕಾನ್ಸಟೆಬಲ್ ಮತ್ತು ಮೂವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಮಾನತು ಮಾಡಿದ್ದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ.ಸುಧಾಕರ್ ಮಾತನಾಡಿ, "ಪ್ರೀತಂ ಮೇಲೆ ಚಿಕ್ಕಮಗಳೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಪ್ರೀತಂ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸದೇ ಇರುವುದು ಕಾನೂನಿನ ಉಲ್ಲಂಘನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.